ರಾಯಚೂರು ಫೆಬ್ರವರಿ 24 (ಕರ್ನಾಟಕ ವಾರ್ತೆ): ಶಿಕ್ಷಣ ಪಡೆದಾಗ ಮಾತ್ರ ನಾವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಶಿಕ್ಷಣದಿಂದ ಮಾತ್ರ ಎಲ್ಲ ಸ್ಥಾನಮಾನಗಳು ಲಭ್ಯವಾಗಲಿದ್ದು, ಭೋವಿ ಸಮುದಾಯದ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಅವರು ಹೇಳಿದರು.
ಫೆ.24ರ ಮಂಗಳವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಭೋವಿ ನಿಗಮದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಮುದಾಯದ ಮುಖಂಡರೊಂದಿಗೆ ಸಮಾಲೊಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಿಳಿವಳಿಕೆ ಮತ್ತು ವಿಚಾರದಿಂದಲೇ ನನಗೆ ಜೀವನದಲ್ಲಿ ಎಲ್ಲ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿದೆ. ಆ ತಿಳಿವಳಿಕೆಯು ಶಿಕ್ಷಣದಿಂದಲೇ ಬಂದಿದೆ. ಆದ್ದರಿಂದ ನಮ್ಮ ಬದಲಾವಣೆಗೆ ಶಿಕ್ಷಣವೊಂದೇ ದಾರಿಯಾಗಿದೆ. ಈ ಭಾಗದಲ್ಲಿ ಶಿಕ್ಷಣದ ಪ್ರಮಾಣದ ಕಡಿಮೆ ಇದೆ. ಸಮಾಜದ ಮುಖಂಡರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ನಾನು ಬಡತನದ ಕುಟುಂಬದಿಂದ ಬಂದಿದ್ದೇನೆ. ಬಡವ ಕಷ್ಟಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸಬೇಕೆಂಬುದು ಗೊತ್ತಿದೆ. ಯಾರೇ ಆಗಲಿ ಯಾವುದೇ ವೇಳೆಯಲ್ಲಿ ಕರೆ ಮಾಡಿದರೂ ಸ್ವೀಕರಿಸಿ ಮಾತನಾಡುತ್ತೇನೆ. ಸಮಾಜದ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ವಸತಿ ಪ್ರವೇಶಕ್ಕಾಗಿ ಜನಸಾಮಾನ್ಯರು ಯಾವುದೇ ಸಮಯದಲ್ಲಿ ಸಹ ಸಂಪರ್ಕ ಮಾಡಬಹುದಾಗಿದೆ ಎಂದರು.
ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಭೋವಿ ಅಭಿವೃದ್ಧಿ ನಿಗಮದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ನಾನು ಅವರಿಗೆ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ನನ್ನ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಕೆಲಸಗಳನ್ನು ಅರ್ಹರಿಗೆ ತಲುಪಿಸಲು ಶ್ರಮಿಸುತ್ತೇನೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಭೋವಿ ಅಭಿವೃದ್ಧಿ ನಿಗಮಕ್ಕೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದ್ದು, ಕಟ್ಟಕಡೆಯ ವ್ಯಕ್ತಿಗೂ ಕಾರ್ಯಕ್ರಮದ ಲಾಭವನ್ನು ತಲುಪಿಸಲಾಗುತ್ತದೆ ಎಂದರು.
ಅಧಿಕಾರಿಗಳಿಗೆ ಸೂಚನೆ: ಸಮಾರಂಭದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಭೋವಿ ನಿಗಮದ ಸಮಗ್ರ ಯೋಜನೆಗಳ ಬಗ್ಗೆ ಸವಿಸ್ತರವಾಗಿ ತಿಳಿಸಲಾಯಿತು. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಚಂದ್ರು ನಾಯ್ಕ್ ಯು ಅವರು ಆಯಾ ಯೋಜನೆಗಳ ಬಗ್ಗೆ ಸಮಾರಂಭದಲ್ಲಿ ವಿವರಿಸಿದರು. ಸಭೆಯಲ್ಲಿ ಚರ್ಚೆಯಾಗುವ ಎಲ್ಲ ವಿಷಯಗಳನ್ನು ಕಡ್ಡಾಯವಾಗಿ ಸಂಬಂಧಿಸಿದ ಅಧಿಕಾರಿಗಳು ಗುರುತಿಸಿ, ಸಂಬಂಧಿಸಿದ ಫಲಾನುಭವಿಗಳೊಂದಿಗೆ ಚರ್ಚಿಸಿ ಸೌಲಭ್ಯ ದೊರಕಿಸಬೇಕು ಎಂದು ಇದೆ ವೇಳೆ ಅಧ್ಯಕ್ಷರು ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖಂಡರೊಂದಿಗೆ ಸಂವಾದ: ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸಮುದಾಯದ ಮುಖಂಡರೊಂದಿಗೆ ಅಧ್ಯಕ್ಷರು ಸಂವಾದ ನಡೆಸಿದರು. ತಾಂತ್ರಿಕ ಶಿಕ್ಷಣ ಮುಗಿಸಿದ ಸಮಾಜದ ನಿರುದ್ಯೋಗಿಗಳಿಗೆ ಆರ್ಥಿಕ ಸಹಾಯ ಮಾಡಬೇಕು. ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕೆಂದು ಸಭೆಯಲ್ಲಿ ಮೊದಲಿಗೆ ಸಿಂಧನೂರಿನ ಮಲ್ಲೇಶ ಅವರು ಮನವಿ ಮಾಡಿದರು. ನಿಗಮದಿಂದ ವಸತಿ ನಿಯಮವನ್ನು ಪ್ರಾರಂಭಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಮಲ್ಲೇಶ ರಾಯಚೂರು ಅವರು ಒತ್ತಾಯಿಸಿದರು. ನಿಗಮದಿಂದ ಭೂ ಒಡೆತನ ಯೋಜನೆಯಡಿ ಜಮೀನು ಮಂಜೂರಾಗಿದ್ದು, ಜಮೀನಿನ ಮೂಲ ಮಾಲೀಕರು ತಕಾರರು ಹಾಕಿದ್ದು, ಸಮಸ್ಯೆ ಬಗೆಹರಿಸಬೇಕು. ಭೂ ಒಡೆತನ ಯೋಜನೆಯಡಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಡಬೇಕೆಂದು ಹನುಮಂತ ದೇವದುರ್ಗ ಅವರು ಮನವಿ ಮಾಡಿದರು. ಭೋವಿ ಅಭಿವೃದ್ಧಿ ನಿಗಮದಿಂದ ಸಮಾಜದ ಫಲಾನುಭವಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಸೌಲಭ್ಯಗಳನ್ನು ನೀಡಬೇಕು. ನಿಗಮದ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮಾಡಿಸಬೇಕೆಂದು ವೆಂಕಟೇಶ ಸಿಂಧನೂರು ಅವರು ತಿಳಿಸಿದರು. ಸಾಲ ಸೌಲಭ್ಯ ವಿತರಣೆ ವೇಳೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಜನರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುವದಿಲ್ಲ. ಕೂಡಲೇ ಬ್ಯಾಂಕುಗಳ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಬೇಕು. ಅಲ್ಲದೆ ಭೋವಿ ಸಮಾಜದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿತರಣೆಗೆ ಅಗತ್ಯ ಕ್ರಮ ವಹಿಸಬೇಕೆಂದು ರಾಯಚೂರಿನ ಶಶಿಕಲಾ ಭೀಮರಾಯ ಅವರು ಅಧ್ಯಕ್ಷರ ಗಮನಕ್ಕೆ ತಂದರು.
ಹಕ್ಕು ಪತ್ರ ವಿತರಣೆ: ನಿಗಮದ ಪ್ರತಿಷ್ಠಿತ ಯೋಜನೆಯಾದ ಭೂ ಒಡೆತನ ಯೋಜನೆಯಡಿ ಸರಸ್ವತಿ ರಮೇಶ, ನಿಂಗಮ್ಮ, ಶೈಲಜಾ, ತಾಯಮ್ಮ, ಉಷಾ, ರೇಣುಕಮ್ಮ ಅವರಿಗೆ ಹಕ್ಕು ಪತ್ರಗಳನ್ನು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪ ಅವರು ವಿತರಣೆ ಮಾಡಿದರು.
ಸಭೆಗೂ ಮುನ್ನ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ರಾಯಚೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ, ಅದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ರಾಜೇಂದ್ರ ಜಲ್ದಾರ್, ಸಮಾಜದ ಮುಖಂಡರಾದ ಯಲ್ಲಪ್ಪ, ನಾರಾಯಣ ಸ್ವಾಮಿ, ಚಿತ್ರದುರ್ಗ ಭೋವಿ ಸಮಾಜದ ಜಿಲ್ಲಾಧ್ಯಕ್ಷರಾದ ತಿಪ್ಪೇಸ್ವಾಮಿ, ಶಶಿಕಲಾ ಭೀಮರಾಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿಗಳಾದ ದಂಡಪ್ಪ ಬಿರಾದಾರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *