ಮಾನ್ವಿ : ತಾಲೂಕಿನ ಜಾಗೀರಪನ್ನೂರು ಗ್ರಾಮದಲ್ಲಿನ ರೈತ ಯಂಕೋಬರವರ ಜಮೀನಿನಲ್ಲಿ ಹಾಕಲಾದ ಜೋಳದ ರಾಶಿಗೆ ಬೆಂಕಿ ಬಿದ್ದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದ್ದು, ಸ್ಥಳಕ್ಕೆ ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಅನುಮಾನವಿದ್ದು, ಸಂಬಂಧಿಸಿದ ತನಿಖಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಬೆಂಕಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಅವರು ರೈತ ಯಂಕೋಬರವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ರೈತರು ಈಗಾಗಲೇ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆಗಳು ಅವರ ಜೀವನಕ್ಕೆ ದೊಡ್ಡ ಹೊಡೆತ ನೀಡುತ್ತವೆ. ಆದ್ದರಿಂದ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್. ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಶರಣಪ್ಪಗೌಡ ಮದ್ಲಾಪುರ, ಬಾಷಾ ಸಾಬ್, ಪಿ. ರವಿಕುಮಾರ ವಕೀಲರು, ಯಲ್ಲಪ್ಪ ನಾಯಕ ವಕೀಲರು, ಸಂಗನಗೌಡ ಜಾಗೀರಪನ್ನೂರು, ವಿಜಯ್ ನಾಯಕ ಕೊಟ್ನೆಕಲ್, ಖಾಸಿಂ ಸಾಬ್ ಚಿಕಲಪರ್ವಿ, ಬಸವರಾಜ ಸ್ವಾಮಿ ಚಿಕಲಪರ್ವಿ, ಬಸವರಾಜ ಜಾಗೀರಪನ್ನೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



