ಮಾನ್ವಿ : ಈ ಜಗತ್ತಿನಲ್ಲಿ ಬೀಸುವ ತಂಗಾಳಿ ಎಂದರೆ ಸ್ನೇಹ ಒಂದೇ. ಎಂಥಹ ಸಮಯದಲ್ಲೂ “ನಾನಿದ್ದೇನೆ ನಿನ್ನ ಜೊತೆಗೆ” ಎಂದು ನೋವಿನಿಂದ ಅತ್ತಾಗ ಸಂತೈಸಲು, ನಲಿವಿನಿಂದ ನಕ್ಕಾಗ ಜೊತೆಯಾಗಿರಲು ಸ್ನೇಹಿತರು ಬೇಕೇ ಬೇಕು ಎಂದು ಸಾಹಿತಿ ಹಾಗೂ ವಾಗ್ಮಿ ರಮೇಶಬಾಬು ಯಾಳಗಿ ಹೇಳಿದರು. ಅವರು ತಾಲೂಕಿನ ಜಾಗಿರಪನ್ನೂರು ಗ್ರಾಮದ ಲೋಯೋಲಾ ಕಪೆಪಲಾಡಿ ಶಾಲೆಯಲ್ಲಿ ಆಯೋಜಿಸಿದ್ದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರೀತಿಯಲ್ಲಿ ಹಲವು ಸಲ ಸ್ವಾರ್ಥ ಹಾಗೂ ಸುಖದ ವಿರಸ ಕಾಣಬಹುದು. ಆದರೆ ಸ್ನೇಹದಲ್ಲಿ ಯಾವಾಗಲೂ ಸಮರಸಭಾವದ ನಿಸ್ವಾರ್ಥತೆ ಇರುತ್ತದೆ. ಕಷ್ಟದ ದಿನಗಳಲ್ಲಿ ಕೈ ಹಿಡಿದು ಮುನ್ನಡೆಸುವ ಸ್ನೇಹಿತರೇ ನಮ್ಮೆಲ್ಲರ ನಿಜವಾದ ಸಂಪತ್ತು. ಪವಿತ್ರವಾದ ಸ್ನೇಹದಲ್ಲಿ ಜಾತಿ ಭೇದಭಾವವಿರುವುದಿಲ್ಲ, ಅಂತಸ್ತಿನ ಅಹಂಕಾರವೂ ಇರುವುದಿಲ್ಲ ಹಾಗೂ ಹಣದ ಪ್ರಭಾವವೂ ಕಾಣುವುದಿಲ್ಲ. ಸಜ್ಜನಿಕೆಯ ಸ್ನೇಹಿತರು ದೇವರು ಕೊಟ್ಟ ವರವಾಗಿದ್ದು, ಸ್ನೇಹಿತರ ಆಯ್ಕೆಯಲ್ಲಿ ಜಾಗೃತಿ ವಹಿಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ಯಾಳಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ನಿರ್ದೇಶಕರಾದ ವಂದನೀಯ ಫಾದರ್ ರಾಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಸಹಾಯಕ ನಿರ್ದೇಶಕರಾದ ವಂದನೀಯ ಫಾದರ್ ಬರ್ತಾಲೋಮ್, ಮುಖ್ಯ ಗುರುಗಳಾದ ಸಿಸ್ಟರ್ ಸೆಲಿನಾ ಮೇರಿ, ಕಾರ್ಯಕ್ರಮದ ಸಂಯೋಜಕರಾದ ಶಿಕ್ಷಕ ಮರಿಯಪ್ಪ ಹಾಗೂ ವೀರೇಶ್ ಗೌಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಾಲೆಯ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕಿ ಸರಿತಾ ಸ್ವಾಗತಿಸಿದರು, ಶಿಕ್ಷಕ ಮರಿಯಪ್ಪ ಅತಿಥಿಗಳನ್ನು ಪರಿಚಯಿಸಿದರು, ವೀರೇಶ್ ಗೌಡ ಹಾಗೂ ಆನಂದ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಪ್ರಮೀಳಾ ವಂದಿಸಿದರು.

Leave a Reply

Your email address will not be published. Required fields are marked *