ಜಾಲಹಳ್ಳಿ : ಫೆ 24 ರಂದು ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ, ಜಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರು ಭ್ರಷ್ಟಾಚಾರ ಮತ್ತು ನಿಯಮಬಾಹಿರ ನೇಮಕಾತಿ ವಿರುದ್ಧ ಧರಣಿ ನಡೆಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘ ಗ್ರಾಮ ಸಮಿತಿ ಜಾಲಹಳ್ಳಿ ವತಿಯಿಂದ ಆಯೋಜಿಸಲಾದ ಈ ಪ್ರತಿಭಟನೆಯಲ್ಲಿ, ಕಳೆದ ಎರಡು ವರ್ಷಗಳಿಂದ ಸಹಕಾರ ಸಂಘದಲ್ಲಿ ನಿರಂತರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಅಧಿಕಾರ ದುರುಪಯೋಗ ನಡೆಯುತ್ತಿದೆ ಎಂದು ಆರೋಪಿಸಲಾಯಿತು. ಇದರಿಂದ ರೈತರು ಹಾಗೂ ಸಣ್ಣ ವ್ಯಾಪಾರಸ್ಥರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸಹಕಾರಿ ಸಂಘವು ರೈತರ ಆರ್ಥಿಕ ಬೆನ್ನೆಲುಬಾಗಿರಬೇಕಾದ ಸಂಸ್ಥೆಯಾಗಿದ್ದರೂ, ಕೆಲ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಅದನ್ನು ವೈಯಕ್ತಿಕ ಲಾಭದ ಸಾಧನವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರ್ಯದರ್ಶಿ ನೇಮಕಾತಿಯಲ್ಲಿ ಸಹಕಾರಿ ನಿಯಮಾವಳಿ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗಿದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ್ ಆರೋಪಿಸಿದರು. ಪಾರದರ್ಶಕತೆ ಹಾಗೂ ಮೀಸಲಾತಿ ನಿಯಮಗಳನ್ನು ಕಡೆಗಣಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಬ್ಯಾಂಕ್ ಖಾತೆಗಳ ಹಣಕಾಸು ವ್ಯವಹಾರಗಳಲ್ಲಿ ಗಂಭೀರ ಅನುಮಾನಗಳಿದ್ದರೂ ಸಮಗ್ರ ತನಿಖೆಗೆ ಮೇಲಾಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಚಂದಪ್ಪ ಬುದ್ದಿನ್ನಿ ಹೊಸೂರು ಆರೋಪಿಸಿದರು.

ಪ್ರಮುಖ ಬೇಡಿಕೆಗಳು:

1. ಕಳೆದ ಎರಡು ವರ್ಷದ ಹಣಕಾಸು ವ್ಯವಹಾರಗಳ ಕುರಿತು ಸ್ವತಂತ್ರ ಮತ್ತು ನ್ಯಾಯಸಮ್ಮತ ತನಿಖೆ ನಡೆಸಬೇಕು.

2. ಕಾರ್ಯದರ್ಶಿ ನೇಮಕಾತಿಯನ್ನು ನಿಯಮಾನುಸಾರ ಮರುಪ್ರಕ್ರಿಯೆ ಮೂಲಕ ನಡೆಸಬೇಕು.

3. ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

4. ರೈತರ ಹಣದ ಭದ್ರತೆಗೆ ವಿಶೇಷ ಮೇಲ್ವಿಚಾರಣ ಸಮಿತಿ ರಚಿಸಬೇಕು.

5. ಸಂಬಂಧಿಸಿದ ಮೇಲಾಧಿಕಾರಿಗಳ ಪಾತ್ರವನ್ನೂ ತನಿಖೆ ವ್ಯಾಪ್ತಿಗೆ ಒಳಪಡಿಸಬೇಕು.

 

ಈ ಸಂದರ್ಭದಲ್ಲಿ CITU ಮುಖಂಡ ಗಿರಿಯಪ್ಪ ಪೂಜಾರಿ ಮಾತನಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘ ಜಾಲಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಹನುಮಂತಪ್ಪ ಮಡಿವಾಳ ಸ್ವಾಗತಿಸಿದರು.

ಧರಣಿಯಲ್ಲಿ ವಿವಿಧ ಗ್ರಾಮ ಸಮಿತಿಗಳ ಪದಾಧಿಕಾರಿಗಳು, ಪಂಚಾಯತ್ ಸದಸ್ಯರು, ತಿಮ್ಮಣ್ಣ ದಿವಾನ್, ಮಕ್ತುಮ್ ಪರಾಶಿ, ಸ್ಥಳೀಯ ಮುಖಂಡ ಚಂದಪ್ಪ ಬುದ್ದಿನ್ನಿ, ಡಿವೈಎಫ್‌ಐ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ರೈತ ಮತ್ತು ಕಾರ್ಮಿಕ ಸಂಘದ ಮುಖಂಡ ಶಬ್ಬೀರ್ ಜಾಲಹಳ್ಳಿ ಸೇರಿದಂತೆ ರಂಗನಾಥ್ ಬುಂಕಲ್ದೊಡ್ಡಿ ಮೌನೇಶ್ ದಾಸರ್, ರಾಜು ನಾಯಕ್, ಕಲಿಮುದ್ದಾರ್, ದುರ್ಗಪ್ಪ ಹೊರಟಿ ಬಸವರಾಜ್ ವಂದಲಿ, ಹನುಮಂತ ಮಂಡಲಗುಡ್ಡ, ಮಲ್ಲಪ್ಪ ಗಾಜಿಲ್ದಿನ್ನಿ ಅನೇಕ ಸಾರ್ವಜನಿಕರು ಭಾಗವಹಿಸಿದರು.

ವರದಿ: ಖಾಜಾಹುಸೇನ್
ಬಾಬಾ, ಜಾಲಹಳ್ಳಿ

Leave a Reply

Your email address will not be published. Required fields are marked *