ಮಾನ್ವಿ : ತಾಲೂಕಿನ ಯುವಕರು ಭಾರತೀಯ ಸೇನೆಗೆ ಸೇರುವ ಆಸಕ್ತಿ ಹೊಂದಿದ್ದಲ್ಲಿ, ಅಗ್ನಿಪಥ್ ಯೋಜನೆಯಡಿ ಸುಮಾರು 25 ಸಾವಿರಕ್ಕೂ ಹೆಚ್ಚು ಅಗ್ನಿವೀರ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಏಪ್ರಿಲ್ 1 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಯಚೂರು ಜಿಲ್ಲಾ ಅಧ್ಯಕ್ಷ ಚೆನ್ನಾರೆಡ್ಡಿ ತಿಳಿಸಿದ್ದಾರೆ.
ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ www.joinindianarmy.nic.in ಗೆ ಭೇಟಿ ನೀಡಿ ಅಗ್ನಿಪಥ್ ಟ್ಯಾಬ್ ಕ್ಲಿಕ್ ಮಾಡಿ, ಆಧಾರ್ ಕಾರ್ಡ್ ಅಥವಾ 10ನೇ ತರಗತಿ ಪ್ರಮಾಣ ಪತ್ರದ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ಶುಲ್ಕ ₹250 ಆಗಿದೆ. ಈ ಬಾರಿ ಅಗ್ನಿವೀರ್ ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್ ಹಾಗೂ ಸ್ಟೋರ್ ಕೀಪರ್, ಟ್ರೇಡ್ಸ್ಮನ್ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅಗ್ನಿವೀರ್ ಜನರಲ್ ಡ್ಯೂಟಿ ಹುದ್ದೆಗೆ 10ನೇ ತರಗತಿಯಲ್ಲಿ ಕನಿಷ್ಠ ಶೇ.45 ಅಂಕಗಳು ಅಗತ್ಯ. ಟೆಕ್ನಿಕಲ್ ಹುದ್ದೆಗೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು ಅಥವಾ 10ನೇ ತರಗತಿಯ ಜೊತೆಗೆ ಐಟಿಐ ಪೂರ್ಣಗೊಳಿಸಿರಬೇಕು. ಕ್ಲರ್ಕ್ ಹಾಗೂ ಸ್ಟೋರ್ ಕೀಪರ್ ಹುದ್ದೆಗೆ ಪಿಯುಸಿ ಯಲ್ಲಿ ಕನಿಷ್ಠ ಶೇ.60 ಅಂಕಗಳು ಹಾಗೂ ಇಂಗ್ಲಿಷ್ ಮತ್ತು ಗಣಿತ ವಿಷಯ ಕಡ್ಡಾಯವಾಗಿದೆ. ಟ್ರೇಡ್ಸ್ಮನ್ ಹುದ್ದೆಗೆ 8ನೇ ಅಥವಾ 10ನೇ ತರಗತಿ ಉತ್ತೀರ್ಣರಾಗಿರಬೇಕು.
ನೇಮಕಾತಿ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ ಮತ್ತು ಎರಡನೇ ಹಂತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಕ್ಲರ್ಕ್ ಹುದ್ದೆಗೆ ಟೈಪಿಂಗ್ ಪರೀಕ್ಷೆ ಸಹ ಇರಲಿದೆ. ಆಯ್ಕೆಯಾದ ಅಗ್ನಿವೀರರಿಗೆ ಆಕರ್ಷಕ ವೇತನ, ವಿವಿಧ ಸವಲತ್ತುಗಳು ಹಾಗೂ ಸೇವಾ ನಿಧಿ ಪ್ಯಾಕೇಜ್ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ 9591208111 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

