ಮಸ್ಕಿ: ತಾಲೂಕಿನಲ್ಲಿರುವ ನಿವೃತ್ತ ಸೈನಿಕರಿಗೆ ಮತ್ತು ಮೃತ ಸೈನಿಕರ ಕುಟುಂಬಸ್ಥರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮಸ್ಕಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಸೋಮವಾರ ಒತ್ತಾಯಿಸಿದರು.
ನಂತರ ದಲಿತ ಸಂಘರ್ಷ ಸಮಿತಿ ಮಸ್ಕಿ ನಗರ ಘಟಕ ಅಧ್ಯಕ್ಷ ಮಲ್ಲಿಕ್ ಮುರಾರಿ ಮಾತನಾಡಿ, ನಿವೃತ್ತ ಹಾಗೂ ಮೃತ ಮಾಜಿ ಸೈನಿಕರ ಕುಟುಂಬಸ್ಥರಿಗೆ ಸರಕಾರದಿಂದ ಜಮೀನನ್ನು ನೀಡುವಂತೆ ಅರ್ಜಿ ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಭೂಮಿ ಮಂಜೂರು ಮಾಡದೇ ನಿರ್ಲಕ್ಷö್ಯ ವಹಿಸುತ್ತಿದ್ದಾರೆಂದು ಆರೋಪಿಸಿದರು.
ನಿವೃತ್ತಿ ಹೊಂದಿ ತಮಗೆ ಸಿಗಬೇಕಾದ ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ದಿನ ನಿತ್ಯ ಸರ್ಕಾರಿ ಕಛೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಜಮೀನು ಮಂಜೂರಿಗಾಗಿ ಒಟ್ಟು ೧೦೫ ಜನ ನಿವೃತ್ತ ಸೈನಿಕರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಮಸ್ಕಿ ತಾಲೂಕಿನಿಂದ ೦೭ ಅರ್ಜಿಗಳು ಸಲ್ಲಿಕೆಯಾಗಿ ಸುಮಾರು ವರ್ಷಗಳಾದರೂ ಅವರಿಗೆ ಜಮೀನು ಮಂಜೂರು ಮಾಡದೆ ಅಧಿಕಾರಿಗಳ ಬೇಜವಾಬ್ದಾರಿ, ನಿಷ್ಠಾಳಜಿತನ ಎದ್ದು ಕಾಣಿಸುತ್ತದೆ. ತಾಲೂಕಿನಲ್ಲಿ ಸರ್ಕಾರಿ ಜಮೀನುಗಳಿದ್ದು, ತಾಲೂಕಿನ ಗುಡದೂರ ಹೋಬಳಿಯ ಮೇರನಾಳ ಗ್ರಾಮದ ಸರ್ವೆ ನಂ.೬೬/೧ ೩೬ ಎಕರೆ ೦೧ ಗುಂಟೆ ಸರಕಾರಿ ಗಾಯರಾಣ ಜಮೀನಿದ್ದು, ತಾಲೂಕಿನ ೦೭ ಜನ ನಿವೃತ್ತ ಸೈನಿಕರಿಗೆ ಕೂಡಲೇ ಸರ್ಕಾರಿ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಈರಪ್ಪ ಕುಣೆಕೆಲ್ಲೂರು, ಮರಿಸ್ವಾಮಿ ಹಸಮಕಲ್, ರಾಜು ಗುಡದೂರು, ಮರಿಸ್ವಾಮಿ, ಪ್ರದೀಪ, ಅಜಯ, ಪ್ರಮೋದ, ಸುರೇಶ ಗುಡದೂರು, ಬಸವರಾಜ, ಶೇಖರ, ಬಸವಲಿಂಗಪ್ಪ, ದೇವರಾಜ ಇದ್ದರು.

