ಸಿಂಧನೂರ: ಆನೆಕಾಲು ರೋಗಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ತಡರಾತ್ರಿ 10:00 ಮೇಲ್ಪಟ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದ ‘ರಾತ್ರಿ ರಕ್ತಲೇಪನ ಸಂಗ್ರಹ’ (Night Blood Survey) ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಸೊಳ್ಳೆಗಳಿಂದ ಹರಡುವ ಆನೆಕಾಲು ರೋಗವು (Lymphatic Filariasis) ವ್ಯಕ್ತಿಯ ಜೀವನದ ದಕ್ಷತೆಯನ್ನು ಕುಂದಿಸುತ್ತದೆ. ಈ ರೋಗದ ಕಾರಕವಾದ ‘ಮೈಕ್ರೋಫೈಲೇರಿಯಾ’ ಪರಾವಲಂಬಿ ಜೀವಿಗಳು ಕೇವಲ ರಾತ್ರಿಯ ವೇಳೆಯಲ್ಲಿ ಮನುಷ್ಯನ ರಕ್ತದ ಪರಿಚಲನೆಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ನಿಖರವಾದ ರೋಗ ಪತ್ತೆಗಾಗಿ ರಾತ್ರಿ ಸಮಯದಲ್ಲಿಯೇ ರಕ್ತದ ಮಾದರಿಗಳನ್ನು ಸಂಗ್ರಹಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ತಾಲೂಕಾ ವಿ.ಬಿ.ಡಿ.ಟಿ.ಎಸ್ -ಎಫ್.ಎ.ಹಣಗಿ ಈ ಸಂದರ್ಭದಲ್ಲಿ ತಿಳಿಸಿದರು.
ಗಾಂಧಿನಗರ ಗ್ರಾಮದಲ್ಲಿ ನಡೆದ ಈ ಕಾರ್ಯಕ್ಕೆ ತಾಲೂಕಾ ವಿ.ಬಿ.ಡಿ (VBD) ಮೇಲ್ವಿಚಾರಕರು ಮತ್ತು ಎಪಿಡೆಮಿಯಾಲಜಿಸ್ಟ್ ಕು.ನಿಖಿಲ್ (Epidemiologist) ಅವರು ಭೇಟಿ ನೀಡಿ ಮಾರ್ಗದರ್ಶನ ನೀಡಿದರು. ಸ್ಥಳೀಯ ಹಿರಿಯ ಆರೋಗ್ಯ ಸಹಾಯಕರಾದ ಸಂಗನಗೌಡ ಅವರ ನೇತೃತ್ವದಲ್ಲಿ ತಂಡವು ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರ ರಕ್ತದ ಮಾದರಿಯನ್ನು ಸಂಗ್ರಹಿಸಿತು.
ಈ ಕಾರ್ಯಾಚರಣೆಯಲ್ಲಿ ಪ್ರಾ.ಆರೋಗ್ಯ ಕೇಂದ್ರದ ಅಧಿಕಾರಿಗಳು, ಹೆಚ್.ಐ.ಓ (HIO), ಪಿ.ಹೆಚ್.ಸಿ.ಓ (PHCO) ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಮತ್ತು ಆಶಾ.ಕಾ.ಕರ್ತೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *