ರಾಯಚೂರು ನವೆಂಬರ್ 25 (ಕ.ವಾ.): ರಾಜ್ಯ ಸರ್ಕಾರದ ಆದೇಶದಂತೆ, 2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಭತ್ತ, ಸಾಮಾನ್ಯ ಪ್ರತಿ ಕ್ವಿಂಟಾಲ್‌ಗೆ ರೂ. 2,369 ಹಾಗೂ ಭತ್ತ ಗ್ರೇಡ್-ಎ ಪ್ರತಿ ಕ್ವಿಂಟಾಲ್‌ಗೆ ರೂ. 2,389 ರಂತೆ ಖರೀದಿಸಲು ಮಾನವಿ ಮತ್ತು ಸಿಂಧನೂರು ತಾಲೂಕು ಕೇಂದ್ರಗಳಲ್ಲಿ ನೋಂದಣಿ ಮತ್ತು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ತಿಳಿಸಿದ್ದಾರೆ.
ಮಾನವಿಯ ಎಪಿಎಂಸಿ ಆವರಣದಲ್ಲಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಮಳಿಗೆ ಮತ್ತು ಸಿಂಧನೂರು ತಾಲೂಕಿನ ಬಪ್ಪೂರು ರಸ್ತೆಯಲ್ಲಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಸಗಟು ಗೋದಾಮು ಆವರಣಗಳನ್ನು ನೋಂದಣಿ ಮತ್ತು ಖರೀದಿ ಕೇಂದ್ರ ಎಂದು ಗುರುತಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಖರೀದಿಸಬೇಕಾಗಿರುವುದರಿಂದ ರೈತ ಭಾಂದವರು ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಲ್ಲಿ ಡಿಸೆಂಬರ್ 31ರವರೆಗೂ ರೈತರ ನೋಂದಣಿಯನ್ನು ಮಾಡಿಕೊಳ್ಳಲಾಗುವುದು ಹಾಗೂ ನೋಂದಾಯಿತ ರೈತರಿಂದ ಖರೀದಿ ಪ್ರಕ್ರಿಯೆಯನ್ನು 2025ರ ನವೆಂಬರ್ ಮಾಹೆಯಿಂದ ಆರಂಭಿಸಿ 2026ರ ಫೆಬ್ರವರಿ 28ರವರೆಗೂ ನಿಗಧಿಪಡಿಸಲಾಗಿರುತ್ತದೆ.
ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ಸ್ ಎಂಬ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೋದಾಯಿಸಿಕೊಳ್ಳಲಾಗುವುದು. ಒಂದು ವೇಳೆ ಫ್ರೂಟ್ಸ್ ತಂತ್ರಾಂಶದಲ್ಲಿ ತೊಂದರೆಯಿದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ಈ ಯೋಜನೆಯಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ

Leave a Reply

Your email address will not be published. Required fields are marked *