ಮಾನ್ವಿ : ತಾಲೂಕು ನೀರಮಾನ್ವಿ ಗ್ರಾಮದ ಸರ್ವೆ ನಂ. 55/1 ಮತ್ತು 56ರಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಚಿತಾ ಮಿಲೇನಿಯಂ ಪ್ರಾಜೆಕ್ಟ್ ಪ್ರೈ. ಲಿಮಿಟೆಡ್ ಸಂಸ್ಥೆಯ ಅಕ್ರಮ ಗಣಿಗಾರಿಕೆ ಹಾಗೂ ಅದಕ್ಕೆ ಸಾಥ್ ನೀಡುತ್ತಿರುವ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಮಾನ್ವಿ ತಾಲೂಕು ಪಂಚಾಯತ್ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಸೇವಕ ಗುರುರಾಜ ನಾಗಲಾಪುರ ಮಾತನಾಡಿದರು. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುವ ರೀತಿಯಲ್ಲಿ ದಂಡದ ಮೊತ್ತದಲ್ಲಿ ಅಕ್ರಮವಾಗಿ ಕಡಿತ ಮಾಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಅಂದಿನ ಸಹಾಯಕ ಆಯುಕ್ತರ ವರದಿಯಂತೆ ವಿಧಿಸಲಾಗಿದ್ದ 188 ಲಕ್ಷ ರೂ. ದಂಡವನ್ನು ಪ್ರಸ್ತುತ ಹಿರಿಯ ಭೂ ವಿಜ್ಞಾನಿ ಮುತ್ತಪ್ಪ, ಮಹೇಶ್ ಹಾಗೂ ಇಂಜಿನಿಯರ್ ನಂದಿನಿ ಅವರು ಅಕ್ರಮವಾಗಿ 82 ಲಕ್ಷ ರೂ.ಗೆ ಇಳಿಸಿರುವುದರಿಂದ ಸರ್ಕಾರಕ್ಕೆ ಭಾರೀ ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು. ಕಂಪನಿಯು ನಿಗದಿತ ಜಾಗಕ್ಕಿಂತ ಸುಮಾರು 3 ಎಕರೆ ಹೆಚ್ಚುವರಿ ಕಂದಾಯ ಹಾಗೂ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮ ಗಣಿಗಾರಿಕೆ ನಡೆಸಿರುವುದು ಪಂಚನಾಮೆಯಿಂದ ಸಾಬೀತಾಗಿದ್ದು, ಈ ಹೆಚ್ಚುವರಿ ಗಣಿಗಾರಿಕೆಗೆ ಪುನಃ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು. ಎನ್.ಒ.ಸಿ ಪಡೆಯದೇ 5 ಎಕರೆ ಲೀಸ್ ಪಡೆದು ಪರಿಸರ ನಿಯಮಗಳನ್ನು ಉಲ್ಲಂಘಿಸಿ ದೊಡ್ಡ ಜನರೇಟರ್‌ಗಳ ಮೂಲಕ ಅಕ್ರಮ ಜಲ್ಲಿ ಉತ್ಪಾದನೆ ನಡೆಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ವ್ಯಕ್ತಪಡಿಸಿದರು.

ಕ್ರಷರ್ ಚಟುವಟಿಕೆಯಿಂದ ಬೆಟ್ಟದೂರು ಗ್ರಾಮದ ಮನೆಗಳಿಗೆ ಹಾನಿಯಾಗಿದ್ದು, ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಬೇಕು. ಅಕ್ರಮ ಎಸಗಿದ ಕಂಪನಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳಾದ ಮುತ್ತಪ್ಪ, ಮಹೇಶ್, ನಂದಿನಿ ಹಾಗೂ ಶೈಲಜಾ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಸರ್ಕಾರಕ್ಕೆ ವಂಚಿಸಿದ ದಂಡದ ಸಂಪೂರ್ಣ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಮುಖಂಡರುಗಳಾದ ಸಂಗನಬಸವ, ಕಿರಣ್ ಉದ್ಬಾಳ್, ಹೊಳೆಯಪ್ಪ, ಶಿವಕುಮಾರ್ ಕೆ., ಹುಸೇನಪ್ಪ ನಂದಿಹಾಳ್, ಶಿವಪುತ್ರ ಕುಪ್ಪೇಗುಡ್ಡ, ಈರಣ್ಣ ನಾಯಕ ಬುರಂಪುರ ಮುಂತಾದವರು ಭಾಗವಹಿಸಿ ಅಕ್ರಮದ ವಿರುದ್ಧ ಧ್ವನಿ ಎತ್ತಿದರು. ಅಲ್ಲದೆ, ಬೆಟ್ಟದೂರು ಮತ್ತು ನೀರಮಾನ್ವಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *