ರಾಯಚೂರು ಫೆಬ್ರವರಿ 13 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ಜಿ.ನಂಜಯ್ಯನಮಠ ಅವರು ಫೆ.13ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಯರಮರಸ್ ಬಳಿಯ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಒಟ್ಟಾರೆ 322 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯು ಈಗಾಗಲೇ ಶೇ.31ರಷ್ಟು ಪೂರ್ಣವಾಗಿದೆ. ಬರುವ ಎರಡೂವರೆ ತಿಂಗಳಲ್ಲಿ ರನ್ ವೇ ಕಾಮಗಾರಿಯು ಪೂರ್ಣವಾಗಲಿದೆ. ಈ ವರ್ಷದಲ್ಲಿ ಮಳೆ ನಿರಂತರವಾಗಿ ಸುರಿದ ಕಾರಣ ರನ್ ವೇ ಕಾಮಗಾರಿಯು ಮಂದಗತಿಯಲ್ಲಿ ಸಾಗಿತ್ತು ಎಂದು ತಿಳಿಸಿದರು.
ಒಟ್ಟಾರೆ ಮುಂದಿನ ಒಂದೂವರೆ ವರ್ಷದ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಮುಂದಿನ 3 ತಿಂಗಳಲ್ಲಿ ಮತ್ತೆ ರಾಯಚೂರು ಪ್ರವಾಸ ಕೈಗೊಂಡು ಪುನಃ ಅಭಿವೃದ್ಧಿ ಕಾರ್ಯ ಪರಿಶೀಲಿಸುವೆ ಎಂದು ಅವರು ತಿಳಿಸಿದರು.
ಏಗನೂರು ಗ್ರಾಮದಲ್ಲಿ 30 ಮನೆಗಳು ಬೇರೆಡೆಗೆ ಸ್ಥಳಾಂತರ ಮಾಡಲು ಮೂರು ಎಕರೆ ಜಮೀನು ಹಾಗೂ ದಂಡ ಗ್ರಾಮದಲ್ಲಿನ 108 ಮನೆಗಳನ್ನು ಬೇರೆಡೆ ಸ್ಥಳಾಂತರ ಮಾಡಲು ಆರು ಎಕರೆ ಜಮೀನಿನಲ್ಲಿ ಲೇಔಟ್ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ವಿಮಾನ ನಿಲ್ದಾಣ ಕಾಮಗಾರಿಯ ಸಂಬಂಧ ಬೇರೇಡೆಗೆ ಸ್ಥಳಾಂತರ ವಾಗುವ ಎರಡು ಗ್ರಾಮಗಳಲ್ಲಿನ ಗ್ರಾಮಸ್ಥರಿಗೆ ಅವರ ಮನೆಯ ಕಿಮ್ಮತಿನ ಪರಿಹಾರವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಜು ಬಂಡಿಕೇರಿ, ರಾಜು ಹರಿಳಯ್ಯಮಠ, ಲೋಕೋಪಯೋಗಿ ಇಲಾಖೆ ಅಭಿಯಂತರಾದ ಮಹೇಶ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *