ಲಿಂಗಸುಗೂರು:
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ರಾಯಚೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಲಿಂಗಸುಗೂರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪ್ರತಿಭಟನಾಕಾರರು ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಬರೆದ ಪ್ರತ್ಯೇಕ ಮನವಿ ಪತ್ರಗಳನ್ನು ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಅವರಿಗೆ ಸಲ್ಲಿಸಿದರು.
ಕೇಂದ್ರ ಸರ್ಕಾರದ 79 ಇಲಾಖೆಗಳಲ್ಲಿ 9.79 ಲಕ್ಷ ಮತ್ತು ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ನೇಮಕಾತಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಲಾಯಿತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಕಾರಣ ನೀಡಿ ನೇಮಕಾತಿ ಸ್ಥಗಿತಗೊಳಿಸಲಾಗಿತ್ತು. ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಒಂದು ಲಕ್ಷ ಹುದ್ದೆಗಳ ಭರ್ತಿಯ ಭರವಸೆ ನೀಡಿತ್ತು. ಆದರೆ ಎರಡುವರೆ ವರ್ಷಗಳಾದರೂ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ ಎಂದು ಆರೋಪಿಸಿದರು.
ಬೆಳಗಾವಿ ಅಧಿವೇಶನದಲ್ಲಿ 56 ಸಾವಿರ ಹುದ್ದೆಗಳ ಭರ್ತಿ ಹಾಗೂ 24,300 ಹುದ್ದೆಗಳಿಗೆ ಆರ್ಥಿಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದ್ದರೂ ಇನ್ನೂ ಅಧಿಸೂಚನೆ ಹೊರಡಿಸಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ನೇಮಕಾತಿ ವಿಳಂಬದಿಂದ ಯುವಜನತೆ ಮಾನಸಿಕವಾಗಿ ಕುಗ್ಗುತ್ತಿದೆ. 2023ರಲ್ಲಿ 14,234 ನಿರುದ್ಯೋಗಿ ಯುವಕರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಎಂದು ತಿಳಿಸಿದರು.
ರಾಯಚೂರು ಜಿಲ್ಲೆಯಲ್ಲಿ 5000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಗ್ರಾಮೀಣ ಶಾಲೆಗಳ ವಿಲೀನ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ದುಬಾರಿ ಅರ್ಜಿ ಶುಲ್ಕ, ಪರೀಕ್ಷೆ ಹಾಗೂ ಸಂದರ್ಶನಕ್ಕಾಗಿ ಹೆಚ್ಚಾದ ಪ್ರಯಾಣ ವೆಚ್ಚದಿಂದ ಉದ್ಯೋಗ ಆಕಾಂಕ್ಷಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಅರ್ಜಿ ಶುಲ್ಕ ರದ್ದುಪಡಿಸಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಪ್ರಮುಖ ಬೇಡಿಕೆಗಳು:
ಖಾಲಿ ಹುದ್ದೆಗಳ ತಕ್ಷಣ ಭರ್ತಿ
ನೇಮಕಾತಿಯಲ್ಲಿ ಪಾರದರ್ಶಕತೆ
ಅರ್ಜಿ ಶುಲ್ಕ ರದ್ದು
ನಿರುದ್ಯೋಗ ಭತ್ಯೆ
ಕೆಪಿಎಸ್ಸಿ ಅಕ್ರಮಗಳ ತಡೆ
ಲಿಂಗಸುಗೂರಿನಲ್ಲಿ ಡಿಜಿಟಲ್ ಲೈಬ್ರರಿ ಸ್ಥಾಪನೆ
ಖಾಸಗೀಕರಣ ರದ್ದು
ಗುತ್ತಿಗೆ ಪದ್ಧತಿ ರದ್ದು
ಈ ಪ್ರತಿಭಟನೆಯನ್ನು ಎಐಡಿವೈಓ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಉಪಾಧ್ಯಕ್ಷ ತಿರುಪತಿ ಗೋನವಾರ ನೇತೃತ್ವ ವಹಿಸಿದ್ದರು. ಉದ್ಯೋಗ ಆಕಾಂಕ್ಷಿಗಳಾದ ಚೇತನ್ ಕುಮಾರ್, ಅಮರೇಶ್, ಸಚಿನ್, ಬಸವಲಿಂಗಪ್ಪ, ಮಂಜುನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *