ಮಾನ್ವಿ : ಪಟ್ಟಣದ ಯರಮಲದೊಡ್ಡಿ ರಸ್ತೆಯ ಪ್ರಕೃತಿ ನಗರದಲ್ಲಿ ಶ್ರೀ ನೆರಳು ಅನಾಥಾಶ್ರಮ ಸೇವಾ ಟ್ರಸ್ಟ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನೆರವೇರಿತು. ಈ ಸಂದರ್ಭದಲ್ಲಿ ಕಲ್ಮಠದ ಪೂಜ್ಯ ಶ್ರೀ ಷ.ಬ್ರ. ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, “ಸಮಾಜದ ಸಹಕಾರವೇ ಆಶ್ರಮದ ಶಕ್ತಿ” ಎಂದು ಹೇಳಿದರು. ಕಟ್ಟಡ ನಿರ್ಮಾಣ ಕಾರ್ಯ ಅತಿ ಶೀಘ್ರದಲ್ಲಿ ಪೂರ್ಣಗೊಳ್ಳಲಿ ಎಂದು ಹಾರೈಸಿದ ಅವರು, ಎಲ್ಲ ನಾಗರಿಕರು ಧನ ಸಹಾಯದ ಮೂಲಕ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇಂದಿನ ಸಮಾಜದಲ್ಲಿ ಮಕ್ಕಳು ದುಶ್ಚಟಗಳಿಗೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಶ್ರೀಗಳು ತಿಳಿಸಿದರು. ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸನ್ಮಾರ್ಗದ ದಾರಿ ತೋರಿಸುವ ಜವಾಬ್ದಾರಿ ಪಾಲಕರದ್ದಾಗಿದೆ. ಸಂಸ್ಕಾರವಂತ ಮಕ್ಕಳು ತಂದೆ-ತಾಯಿಯನ್ನು ಆಶ್ರಮದಲ್ಲಿ ಬಿಡುವುದಿಲ್ಲ; ಕುಟುಂಬದಲ್ಲಿ ಮೌಲ್ಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ಉಪದೇಶಿಸಿದರು. ಕಲ್ಮಠವು ಯಾವಾಗಲೂ ಆಶ್ರಮದೊಂದಿಗೆ ನಿಂತಿರುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸಾಜಿದ್ ಖಾದ್ರಿ, ಸಿದ್ದರಾಮಯ್ಯ ಸ್ವಾಮಿ, ಸಾಹಿತಿಗಳಾದ ರಮೇಶಬಾಬು ಹಾಳಾಗಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಸವನಗೌಡ, ಮುಖಂಡರಾದ ಹರಿಹರ ಪಾಟೀಲ್, ಆದಂ ಬೇಗ್, ರಹೆಮತ್ ಅಲಿ, ಎ.ಕೆ.ಜಾಗೀರದಾರ, ಹನುಮಂತ ಕೋಟೆ, ಡಾ. ವಿವೇಕಾನಂದ,
ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಚನ್ನಬಸಯ್ಯ ಸ್ವಾಮಿ ಯದ್ದಲದೊಡ್ಡಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಹಿರಿಯ ನಾಗರಿಕರರು, ಟ್ರಸ್ಟ್ ನ‌‌ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *