ರಾಯಚೂರು ಫೆಬ್ರವರಿ 07 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿಯ ಸಂತೆಯನ್ನೇ ನೋಡದೇ ಇದ್ದ ನನಗೆ ಊರೂರು ಸುತ್ತಿ ದೇವಸ್ಥಾನಗಳ ದರ್ಶನಕ್ಕೆ ರಾಜ್ಯ ಸರ್ಕಾರದ ಶಕ್ತಿ ಯೋಜನೆಯು ತುಂಬಾ ಸಹಕಾರಿಯಾಗಿದೆ ಎಂದು ಮಸ್ಕಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಬಾಳಮ್ಮ ಎಂಬ ಫಲಾನುಭವಿಯು ತಮ್ಮ ಮನದಾಳದ ಮಾತನ್ನು ಹೇಳಿದರು.
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಯಚೂರು ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಗಾರದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಖುಷಿಯಿಂದ ಮಾತನಾಡಿದರು.
ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಮೂಲಕ ಉಡುಪಿ, ಮಂಗಳೂರು ಸೇರಿದಂತೆ ಹಲವಾರು ಊರುಗಳನ್ನು ನೋಡಿದ್ದೇನೆ ಮತ್ತು ವಿಶೇಷವಾಗಿ ಕೃಷ್ಣ ದೇವಸ್ಥಾನ ಮತ್ತು ಇತರೆ ದೇವಸ್ಥಾನಗಳು ಸೇರಿದಂತೆ ನಮ್ಮ ರಾಜ್ಯದ ವಿವಿಧ ಪುಣ್ಯ ಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದೇನೆ. ಇದಕ್ಕಾಗಿ ಈ ಯೋಜನೆಯನ್ನು ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬಾಳಮ್ಮ ಅವರು ಹೇಳುವಾಗ ಅವರ ಕಣ್ಣಿನಲ್ಲಿ ಧನ್ಯತಾಭಾವ ಎದ್ದು ಕಾಣುತ್ತಿತ್ತು.
ಅನ್ನಭಾಗ್ಯ ಯೋಜನೆಯ ಫಲಾನುಭವಿ ನಾಗರತ್ನ ಅವರು ಮಾತನಾಡಿ, ಅನ್ನಭಾಗ್ಯ ಕೇವಲ ಒಂದು ಯೋಜನೆಯಲ್ಲಾ. ಅದು ಬಡವರ ಹಸಿವನ್ನು ನೀಗಿಸುವಂತಹ ಮಾನವಿಯತೆಯ ಮಹಾನ್ ಕಾರ್ಯವಾಗಿದೆ. ಬೇರೆ ಬೇರೆ ವಿಷಯದಲ್ಲಿ ಆತ್ಮಹತ್ಯೆ ಮಾಡುವುದನ್ನು ಕಾಣುತ್ತೇವೆ. ಆದರೆ, ನಮ್ಮ ರಾಜ್ಯದಲ್ಲಿ ಹಸಿವಿನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಯಾವುದೇ ಪ್ರಕರಣ ಕಂಡುಬಂದಿರುವುದಿಲ್ಲ. ಇದಕ್ಕೆ ಕಾರಣ ಸರ್ಕಾರ ಕೊಟ್ಟಿರುವ ಅನ್ನಭಾಗ್ಯ ಯೋಜನೆಯೇ ಆಗಿದೆ. ಇದರಿಂದ ನಮ್ಮಂತಹ ಬಡವರಿಗೆ ತುಂಬಾ ಅನುಕೂಲವಾಗಿದೆ. ಮೂರೊತ್ತು ನೆಮ್ಮದಿಯಿಂದ ಊಟ ಮಾಡುತ್ತಿದ್ದೇವೆ ಎಂದರು.
ಫಲಾನುಭವಿ ಬೂದೆಮ್ಮ ಅವರು ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಬರುವಂತಹ ಹಣವನ್ನು ಕೂಡಿಟ್ಟು ಬಟ್ಟೆ ವ್ಯಾಪಾರವನ್ನು ಪ್ರಾರಂಭಿಸಿದ್ದೇನೆ. ಇದರಿಂದ ಬರುವ ಲಾಭವನ್ನು ಕುಟುಂಬ ನಿರ್ವಹಣೆಗೆ ಮತ್ತು ನನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇನೆ. ಈ ಯೋಜನೆಯಿಂದ ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿ ಸಿಕ್ಕಂತಾಗಿದೆ. ಯೋಜನೆಯಡಿ ಕಾಲಕಾಲಕ್ಕೆ ಸರ್ಕಾರ ನಮಗೆ ಹಣ ಹಾಕುವುದನ್ನು ನಾವು ಬಯಸುತ್ತೇವೆಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯ ಫಲಾನುಭವಿ ನೇತ್ರಾವತಿ ಅವರು ಮಾತನಾಡಿ, ಈ ಹಿಂದೆ ನಮ್ಮ ಮನೆಯ ವಿದ್ಯುತ್ ಬಿಲ್ ಪ್ರತಿ ತಿಂಗಳು 700 ರಿಂದ 800 ರೂ. ಬರುತ್ತಿತ್ತು. ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ ವಿದ್ಯುತ್ ಬಿಲ್ ಶೂನ್ಯ ಬರುತ್ತಿದ್ದು, ಈ ಹಣ ನಮಗೆ ಉಳಿತಾಯವಾಗಿದೆ. ಇದಕ್ಕಾಗಿ ನಾನು ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಶಕ್ತಿ ಯೋಜನೆಯ ಫಲಾನುಭವಿ ನಾಗರತ್ನ ಅವರು ಮಾತನಾಡಿ, ನಾನು ದೇವದಾಸಿ ಮಹಿಳೆಯರ ಪುನರ್ವಸತಿ ಕಾರ್ಯಕರ್ತೆ ಯಾಗಿ ಕೆಲಸ ಮಾಡುತ್ತಿದ್ದು, ಕೆಲಸ ನಿಮಿತ್ತ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಲು ಪ್ರತಿ ತಿಂಗಳು 4 ಸಾವಿರ ರೂ.ಗಳು ಖರ್ಚಾಗುತ್ತಿದ್ದವು. ಶಕ್ತಿ ಯೋಜನೆ ಜಾರಿಯಿಂದ ನಾನು ಉಚಿತವಾಗಿ ಬಸ್ ಪ್ರಯಾಣವನ್ನು ಮಾಡುತ್ತಿದ್ದು, ಈ ಮೊತ್ತ ನನಗೆ ಉಳಿಯುತ್ತಿದೆ. ಇದಕ್ಕಾಗಿ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಯುವನಿಧಿ ಯೋಜನೆಯಡಿ ಗರೀಬ್ ನವಾಜ್ ಅವರು ಮಾತನಾಡಿ, ಪದವಿ ಮುಗಿಸಿದ ನಂತರ ಏನು ಮಾಡಬೇಕೆಂಬ ಪ್ರಶ್ನೆಗೆ ಪರಿಹಾರವೇ ಯುವನಿಧಿ ಯೋಜನೆಯಾಗಿದೆ. ಇದು ನಮ್ಮಂತ ನಿರುದ್ಯೋಗಿ ಯುವಕರಿಗೆ ಆರ್ಥಿಕ ಭದ್ರತೆಯನ್ನು ನೀಡುವಂತಹ ಕಾರ್ಯಕ್ರಮ. ನನಗೆ ಈವರೆಗೆ ಬಂದ ಯುವನಿಧಿಯ ಸಹಾಯಧನ ಮೊತ್ತವನ್ನು ಕೂಡಿಟ್ಟು ಅದನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯೋಗಿಸಿ ಕೊಳ್ಳುತ್ತಿದ್ದೇನೆ ಎಂದುರು.
ಪಂಚ ಗ್ಯಾರಂಟಿ ಯೋಜನೆಗಳಿಗೆ ಲಾಭ ಪಡೆದು ಅದನ್ನು ಇತರರಿಗೆ ಮಾದರಿಯಾದ ರಾಯಚೂರು ಜಿಲ್ಲೆಯ ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ಅಭಿನಂದನಾ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಾಗಾರದ ಉದ್ಘಾಟನೆಯನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರದ ಎನ್.ಎಸ್.ಬೋಸರಾಜು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ, ರಾಯಚೂರು ಸಂಸದರಾದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ (ಮೈಸೂರು ವಿಭಾಗದ) ಉಪಾಧ್ಯಕ್ಷೆ ಡಾ. ಪುಷ್ಪ ಅಮರನಾಥ, ರಾಯಚೂರು ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾಮಯ್ಯ ಮುರಾರಿ, ಜಿಲ್ಲಾಧಿಕಾರಿಗಳಾದ ಕೆ.ನಿತೀನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಾಗೃತ ಕರ್ನಾಟಕದ ಸಂಚಾಲಕರಾದ ಪ್ರೊ. ಬಿ.ಸಿ.ಬಸವರಾಜ ಸೇರಿದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷರು, ವಿವಿಧ ತಾಲೂಕುಗಳ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



