ರಾಯಚೂರು ಫೆ. 06 (ಕರ್ನಾಟಕ ವಾರ್ತೆ) : ಸರ್ಕಾರವು ಉದ್ಯೋಗ ಮೇಳಗಳನ್ನು ರಾಜ್ಯದಲ್ಲಿ ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ನಿರುದ್ಯೋಗ ನಿವಾರಣೆಗಾಗಿ ಶ್ರಮಿಸುತ್ತಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಭೋಸರಾಜು ಅವರು ಹೇಳಿದರು.ಎಡೆದೊರೆ ನಾಡು ರಾಯಚೂರು ಉತ್ಸವದ ಅಂಗವಾಗಿ ರಾಯಚೂರಿನ ಕೃಷಿ ವಿ.ವಿ. ಆವರಣದಲ್ಲಿ ಉತ್ಸವದ ಎರಡನೆ ದಿನವಾದ ಶುಕ್ರವಾರ ಕೌಶಲ್ಯಾಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ನಿರುದ್ಯೋಗಿಗಳು ತಮ್ಮ ಭವ್ಯ ಭವಿಷ್ಯ ಕಂಡುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ, ಯುವನಿಧಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ, ಅವರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಉದ್ಯೋಗ ಮೇಳಗಳನ್ನು ಹೆಚ್ಚು ಹೆಚ್ಚು ಆಯೋಜಿಸುವ ಮೂಲಕ ಯುವಶಕ್ತಿಗೆ ಆಸರೆಯಾಗುತ್ತಿದೆ. 2023ರ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ‘ಯುವನಿಧಿ’ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಂತಹ ಉದ್ಯೋಗ ಮೇಳದ ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಚಿವ ಎನ್.ಎಸ್. ಭೋಸರಾಜು ಹೇಳಿದರು.
ಸಂಸದ ಜಿ. ಕುಮಾರನಾಯಕ್ ಅವರು ಮಾತನಾಡಿ, ಜಗತ್ತಿನಲ್ಲಿಯೇ ನಮ್ಮ ದೇಶದಲ್ಲಿ ಯುವ ಮಾನವ ಸಂಪನ್ಮೂಲ ಹೆಚ್ಚಿದೆ. ಯುವ ಜನತೆಯೇ ನಮ್ಮ ದೇಶದ ಆಸ್ತಿ. ಈ ಯುವಶಕ್ತಿಯ ಸದ್ಬಳಕೆಯನ್ನು ನಮ್ಮ ದೇಶ ಮಾಡಿಕೊಳ್ಳಬೇಕಿದೆ. ಯುವ ಜನರಿಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲು, ಈ ಶಕ್ತಿಗೆ ಕೌಶಲ್ಯದ ತರಬೇತಿಯೂ ಅಗತ್ಯವಿದೆ. ಇದಕ್ಕಾಗಿ ಸರ್ಕಾರ ಹೆಚ್ಚಿನ ನೆರವು ನೀಡುತ್ತಿದೆ. ಯುವಜನತೆ ಕೌಶಲ್ಯವನ್ನು ಕಲಿತುಕೊಳ್ಳದಿದ್ದರೆ ಭವಿಷ್ಯದಲ್ಲಿ ಉತ್ತಮ ಉದ್ಯೋಗ ದೊರಕುವುದು ಕಷ್ಟಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ಪರಿಶಿಷ್ಟ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಯುವ ಜನತೆಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಿಕೊಡಲು ಕೆಐಎಡಿಬಿ ಅಡಿ 4000 ಎಕರೆ ಪ್ರದೇಶದಲ್ಲಿ ಟೆಕ್ಸ್ಟೈಲ್ ಪಾರ್ಕ್ ಸ್ಥಾಪಿಸಲು ಸಿದ್ಧತೆ ನಡೆದಿದೆ. ಇದರಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯದರೆ, ರಾಯಚೂರು ಜಿಲ್ಲೆಯ ಜನರಿಗೂ ಹೆಚ್ಚಿನ ಉದ್ಯೋಗಗಳು ಸೃಜನೆಯಾಗುತ್ತವೆ ಎಂದರು.
ಉದ್ಯೋಗ ಮೇಳದಲ್ಲಿ 63 ಕಂಪನಿಗಳು ಭಾಗಿ :
***** ರಾಯಚೂರು ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳ ಹಲವಾರು ಯುವ ಜನರಿಗೆ ಬದುಕಿನ ಭದ್ರತೆ ಕಲ್ಪಿಸಿಕೊಳ್ಳಲು ವೇದಿಕೆಯಾಗಿ ಪರಿಗಣಿಸಿತು. ಮೇಳದಲ್ಲಿ ಆಟೋಮೊಬೈಲ್ ಮೆಕ್ಯಾನಿಕಲ್ ಕನ್‌ಸ್ಟ್ರಕ್ಷನ್, ಮಾರ್ಕೆಟಿಂಗ್, ಸೇಲ್ಸ್ ಅಂಡ್ ರೀಟೇಲ್ ಟೆಲಿಕಾಂ, ಬಿಪಿಒ, ಟೆಕ್ಸ್ಟೈಲ್, ಬ್ಯಾಂಕಿAಗ್, ಫೈನಾನ್ಸ್, ಇನ್ಶೂರೆನ್ಸ್, ಹಾಸ್ಪಿಟಲ್ ಫಾರ್ಮಾಸಿಟಿಕಲ್ ಹೆಲ್ತ್ ಕೇರ್, ಟ್ರಾನ್ಸ್ಪೋರ್ಟ್, ಆಹಾರ ಸಂಸ್ಕರಣೆ, ಹೋಟೆಲ್ ನಿರ್ವಹಣೆ, ಗಾರ್ಮೆಂಟ್ಸ್, ಸೆಕ್ಯೂರಿಟಿ ಸೇರಿದಂತೆ ನಾನಾ ವಿಭಾಗದ 63 ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಉದ್ಯೋಗ ಮೇಳಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದರಾದರೂ, ಶುಕ್ರವಾರ ಮಧ್ಯಾಹ್ನದ ವೇಳೆಗೆ 1200 ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದ ಲಾಭ ಪಡೆದುಕೊಂಡರು. ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿರುವ ಕೆಲಸಕ್ಕೆ ಅರ್ಜಿ ಸಲ್ಲಿಸಿ ಸಂದರ್ಶನದಲ್ಲಿ ಭಾಗವಹಿಸಿ ಸ್ಥಳದಲ್ಲಿಯೇ ನೇಮಕಾತಿ ಪತ್ರ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಜಿ.ಪಂ. ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಉದ್ಯೋಗಾಧಿಕಾರಿ ನವೀನ್ ಕುಮಾರ್, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಜಿ.ಯು. ಹುಡೇದ್ ಸೇರಿದಂತೆ ವಿವಿಧ ಅಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು.



