ಮಾನ್ವಿ : ತಾಲೂಕಿನ 17 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಅಧಿಕಾರ ಅವಧಿ ಫೆಬ್ರವರಿ 3ರಿಂದ 5ರವರೆಗೆ ಹಂತ ಹಂತವಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆಡಳಿತಾತ್ಮಕ ನಿರಂತರತೆ ಕಾಪಾಡುವ ಉದ್ದೇಶದಿಂದ ತಾತ್ಕಾಲಿಕ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಉಟುಕುನೂರು ಹಾಗೂ ಪೋತ್ನಾಳ್ ಗ್ರಾಮ ಪಂಚಾಯಿತಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಾನ್ವಿ ಭಾಗಯ್ಯ ನಾಯಕ ಅವರು ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಗ್ರಾಮ ಪಂಚಾಯಿತಿಗಳ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಅದರಂತೆ ಅರೋಲಿ ಗ್ರಾಮ ಪಂಚಾಯಿತಿಗೆ ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು, ಬ್ಯಾಗವಾಟ್ ಹಾಗೂ ಭೋಗವತಿ ಗ್ರಾಮಗಳಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರನ್ನು, ಚಿಕ್ಕೊಟ್ನೆಕಲ್ ಹಾಗೂ ಹಿರೇಕೊಟ್ನೆಕಲ್ ಗ್ರಾಮಗಳಿಗೆ ಆರ್‌ಡಬ್ಲ್ಯೂಎಸ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕರನ್ನು, ಜಾನೇಕಲ್ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರನ್ನು, ಕಪಗಲ್ ಗ್ರಾಮಕ್ಕೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಯನ್ನು, ಕುರುಡಿ ಗ್ರಾಮಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯನ್ನು, ನಕ್ಕುಂದಿ ಹಾಗೂ ಮದ್ಲಾಪುರ್ ಗ್ರಾಮಗಳಿಗೆ ಪ್ರಾದೇಶಿಕ ಅರಣ್ಯ ವಲಯಾಧಿಕಾರಿಯನ್ನು, ಸಂಗಾಪುರ ಗ್ರಾಮಕ್ಕೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಯನ್ನು ಹಾಗೂ ಸಾದಾಪುರ ಮತ್ತು ಸುಂಕೇಶ್ವರ ಗ್ರಾಮಗಳಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಆಡಳಿತಾಧಿಕಾರಿಗಳಾಗಿ ನೇಮಿಸಲಾಗಿದೆ.
ಮುಂದಿನ ಚುನಾವಣೆಗಳು ನಡೆಯುವವರೆಗೆ ನೇಮಕಗೊಂಡ ಆಡಳಿತಾಧಿಕಾರಿಗಳು ಸಂಬಂಧಿತ ಗ್ರಾಮ ಪಂಚಾಯಿತಿಗಳ ಆಡಳಿತ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.


