ರಾಯಚೂರು ಫೆಬ್ರವರಿ 03 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ನಿಮಿತ್ತ ಫೆ.5ರಂದು ಮಧ್ಯಾಹ್ನ 1 ಗಂಟೆಗೆ ಕರ್ನಾಟಕ ಸಂಘದಿಂದ ಉತ್ಸವದ ಜಾಥಾ ಮತ್ತು ಬೈಕ್ ರ‍್ಯಾಲಿ ಕಾರ್ಯಕ್ರಮ ನಡೆಯಲಿದ್ದು, ಮೆರವಣಿಗೆಯು ಕರ್ನಾಟಕ ಸಂಘದಿಂದ ಆರಂಭವಾಗಿ ಬಂಗಾರ ಬಜಾರ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದವರೆಗೆ ಸಂಚರಿಸಲಿದೆ. ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬೈಕ್ ರ‍್ಯಾಲಿ ನಡೆಯಲಿದೆ.
ಈ ಮೆರವಣಿಗೆಯಲ್ಲಿ ವೀರಗಾಸೆ, ಹಗಲುವೇಷ, ಚಿಲಿಪಿಲಿ ಗೊಂಬೆ, ಕೀಲುಕುದುರೆ, ಜಾಂಜಮೇಳ, ಹಗಲುವೇಷ, ಕಣಿಹಲಗೆ, ಡೊಳ್ಳುಕುಣಿತ, ತಾಷಾರೊಂಡಾಲಾ, ಶಹನಾಯಿ ವಾದನ, ಲಂಬಾಣಿ ನೃತ್ಯ, ಕೊಂಬುಕಹಳೆ, ಗೊರವ ಕುಣಿತ, ತಮಟೆವಾದನ, ನಾಸಿಕಡೊಳ್ಳು, ಮಹಿಳಾ ಡೊಳ್ಳು, ಕಹಳೆವಾದನ, ಸೋಮನಕುಣಿತ, ನಂದಿಧ್ವಜ ಮತ್ತು ಸಮಾಳ, ಭದ್ರಕಾಳಿ ಕುಣಿತ, ಸತ್ತೀಗೆ ಕುಣಿತ, ಜಗ್ಗಲಗಿ, ಕೋಳಿ ಕುಣಿತ, ಕರಡಿ ಮಜಲು ಸೇರಿದಂತೆ ನಾನಾ ಕಲಾಪ್ರಕಾರ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿ ಮೆರವಣಿಗೆಯ ಕಳೆ ಹೆಚ್ಚಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
