ರಾಯಚೂರು ಫೆ.02 (ಕ.ವಾ.): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಮಹಾನಗರ ಪಾಲಿಕೆಯ ಆಶ್ರಯದದಲ್ಲಿ ಹಮ್ಮಿಕೊಂಡಿರುವ ಅದ್ದೂರಿ ಮಕ್ಕಳ ಹಬ್ಬಕ್ಕೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಫೆ.2ರಂದು ಚಾಲನೆ ನೀಡಿದರು.
ಈ ಹಬ್ಬಕ್ಕಾಗಿ ನಗರದ ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಬೇರೆ ಬೇರೆ ಶಾಲೆಯ ಮಕ್ಕಳು ಕಿಕ್ಕಿರಿದು ಸೇರಿದ್ದರು.
ಜಿಲ್ಲಾಧಿಕಾರಿಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಸಲಹೆ ಮತ್ತು ಮಕ್ಕಳಿಗಾಗಿಯೇ ನಾವು ರಾಯಚೂರು ಉತ್ಸವದಲ್ಲಿ ಮಕ್ಕಳ ಕಾರ್ಯಕ್ರಮಗಳಿಗೆ ಏರ್ಪಾಡು ಮಾಡಿದ್ದೇವೆ. ಸಾರ್ವಜನಿಕರ, ಸಂಘ ಸಂಸ್ಥೆಗಳ, ಶಿಕ್ಷಣ ಸಂಸ್ಥೆಗಳ ಸಹಕಾರ, ಪರಿಶ್ರಮದಿಂದ ಈ ಮಕ್ಕಳ ಹಬ್ಬ ನಡೆಯುತ್ತಿದೆ.
ಮನರಂಜನೆ ಜೊತೆಗೆ ಜ್ಞಾನ ಸಂಪಾದನೆಗೆ ಸಹ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತಂದು ಸಹಕರಿಸಿದ ರಾಯಚೂರು ಜಿಲ್ಲೆಯ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಭಿನಂದನೆಗಳ ತಿಳಿಸುವೆ. ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ಎಲ್ಲ ಶಾಲೆಗಳ ಶಿಕ್ಷಕ ಶಿಕ್ಷಕಿಯರಲ್ಲಿ ಮನವಿ ಮಾಡಿವೆ ಎಂದರು.
ಜಿಲ್ಲಾ ಪಂಚಾಯ್ ಸಿಇಓ ಈಶ್ವರ ಕಾಂದೂ ಅವರು ಮಾತನಾಡಿ, ಈ ಮಕ್ಕಳ ಹಬ್ಬವು ಜಿಲ್ಲೆಯಲ್ಲಿ ವಿನೂತನವಾಗಿ ನಡೆಯುತ್ತಿರುವುದು ನಮಗೆ ಸ್ಪೂರ್ತಿ ತಂದಿದೆ ಎಂದು ತಿಳಿಸಿದರು.
ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಮಾತನಾಡಿ, ಮಕ್ಕಳು ಈ ಲೋಕದ ಆಸ್ತಿ. ಮಕ್ಕಳನ್ನು ರಂಜಿಸಲು, ಅವರ ಸ್ಮೃತಿಪಟಲದಲ್ಲಿ ಉಳಿಯುವಂತಹ ಕಾರ್ಯಕ್ರಮಕ್ಕೆ ಈ ಮಕ್ಕಳ ಹಬ್ಬ ಆಯೋಜಿಸಲಾಗಿದೆ ಎಂದು ತಿಳಿಸಿದರು.
ರೇಸ್ ಕಾನ್ಸೆಪ್ಟ್ ಶಾಲೆಯ ತನ್ವಿ ನಾಯಕ ಅವರ ಗೀತೆಯ ಮೂಲಕ ಮಕ್ಕಳ ಹಬ್ಬದ ಕಾರ್ಯಕ್ರಮ ಆರಂಭಗೊಂಡಿತು.
ಡಿ.ಸಿ., ಸಿಇಓ, ಪಾಲಿಕೆ ಆಯುಕ್ತರಿಂದ ಹಬ್ಬದ ವೀಕ್ಷಣೆ: ಕಾರ್ಯದೊತ್ತಡದ ಮಧ್ಯೆಯೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ವೇದಿಕೆ ಎದುರುಗಡೆ ಕುಳಿತು ಮಕ್ಕಳ ಕಾರ್ಯಕ್ರಮದ ವೀಕ್ಷಣೆ ನಡೆಸಿದರು.
ಕೋಳಿ ನೃತ್ಯಕ್ಕೆ ಕಿರುಚಿದ ಮಕ್ಕಳು: ಖ್ಯಾತ ಕಲಾವಿದ ಅಶೋಕ ಕೊಳಲಿ ಅವರು ಪ್ರಸ್ತುತಪಡಿಸಿದ ಕೋಳಿ ನೃತ್ಯಕ್ಕೆ ಮಕ್ಕಳು ಜೋರಾಗಿ ಕಿರುಚಿ ಸಂತಷ ವ್ಯಕ್ತಪಡಿಸಿದರು.
ಕುದ್ರೊಳಿ ಗಣೇಶರ ಜಾದೂಗೆ ಮರುಳಾದ ಮಕ್ಕಳು: ಸಮಾರಂಭದಲ್ಲಿ ಮಕ್ಕಳು ಮರಳಾಗುವಂತೆ ಮಾಡಿದ್ದು ಕುದ್ರೊಳಿ ಗಣೇಶ ಅವರ ಜಾದೂ. ತಮ್ಮ ಕೈಚಳಕದಿಂದ ಬಗೆಬಗೆಯ ಜಾದೂ ಮಾಡುತ್ತಿದ್ದಂತೆ ಮಕ್ಕಳು ಚಪ್ಪಾಳೆ ತಟ್ಟಿದರು.
ಡೊಳ್ಳು ಭಾರಿಸಿದ ಅಪರ ಜಿಲ್ಲಾಧಿಕಾರಿಗಳು: ಮಕ್ಕಳ ಹಬ್ಬದಲ್ಲಿ ಭಾಗಿಯಾಗಿದ್ದ ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಡೊಳ್ಳು ಭಾರಿಸಿ ಮಕ್ಕಳ ಸಂತಷದಲ್ಲಿ ಭಾಗಿಯಾದರು.
ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ, ತಹಸೀಲ್ದಾರ ಸುರೇಶ ವರ್ಮಾ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷರಾದ ಕೇಶವರಾವ್ ರೆಡ್ಡಿ, ಕಾರ್ಯದರ್ಶಿಗಳಾದ ಮುರಳೀಧರ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ, ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ ಸೇರಿದಂತೆ ಇತರರ ಇದ್ದರು. ವೈ.ಕೆ.ಯಶೋಧಾ ಅವರು ನಿರೂಪಿಸಿದರು.

Leave a Reply

Your email address will not be published. Required fields are marked *