ಕೊಪ್ಪಳ : ಪಟ್ಟಣದ ಹೊರವಲಯದ ಟೆಂಗುಂಟಿ ರಸ್ತೆಯಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಸಂಸ್ಕರಣಾ ಕೇಂದ್ರದ ಸುತ್ತ ಲಕ್ಷಾಂತರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಆವರಣ ಗೋಡೆ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.2018-19ನೇ ಹಣಕಾಸು ವರ್ಷದಲ್ಲಿ ಸ್ವಚ್ಚ ಭಾರತ ಅಭಿಯಾನ ಯೋಜನೆಯಲ್ಲಿ ನಡೆದಿರುವ ಕಾಮಗಾರಿ ಕಳಪೆಯಾಗಿದ್ದು ಪುರಸಭೆ ಎಂಜಿನಿಯರ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕರ್ತವ್ಯಲೋಪ ಎಸಗಿದ್ದಾರೆ ಎಂದು ಪಟ್ಟಣದ ಮುತ್ತುರಾಜ ಕಟ್ಟಿಮನಿ ಎಂಬುವವರು ಲೋಕಾಯಕ್ತಕ್ಕೆ ದೂರು ಸಲ್ಲಿಸಿದ್ದರು.ದೂರಿನ ಹಿನ್ನೆಲೆ ಬೆಂಗಳೂರು ಲೋಕಾಯುಕ್ತ ಕಚೇರಿಯಿಂದ ಆಗಮಿಸಿದ್ದ ತಾಂತ್ರಿಕ ತನಿಖಾ ಅಧಿಕಾರಿ ಸದ್ಗುಣ ಶೆಟ್ಟಿ ಹಾಗೂ ಇತರೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.ಈ ಕುರಿತು ಪ್ರತಿಕ್ರಿಯಿಸಿದ ತನಿಖಾ ಅಧಿಕಾರಿ ಸದ್ಗುಣ ಶೆಟ್ಟಿ, ‘ದೂರಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಇಲ್ಲಿ ಕಂಡು ಬಂದಿರುವ ಅಂಶಗಳ ವಾಸ್ತವ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.ಸ್ಥಳ ಪರಿಶೀಲನೆ ವೇಳೆ ಜಿಲ್ಲಾ ಅಭಿವೃದ್ಧಿ ಕೋಶದ ಎಂಜಿನಿಯರ್‌ಗಳು, ದೂರುದಾರರು, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಇತರರು ಹಾಜರಿದ್ದರು

