ರಾಯಚೂರು ಜನವರಿ 30 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಫೆ.05 ರಿಂದ ಫೆ.07ರವರೆಗೆ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ನಡೆಸಬೇಕಿದೆ. ಈ ಕಾರ್ಯಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ದಿಶೆಯಲ್ಲಿ ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಯು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಉತ್ಸವದ ಕರಪತ್ರ ನೀಡಿ ಮಾಹಿತಿ ನೀಡುವಂತೆ ಉತ್ಸವದ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ಸಮನ್ವಯಾಧಿಕಾರಿ ಆಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಅವರು ಹೇಳಿದರು.
ಜನವರಿ 29ರ ಗುರುವಾರ ನಗರ ಡಿಹೆಚ್‌ಒ ಕಚೇರಿಯಲ್ಲಿ ಜಿಲ್ಲೆಯ ತಾಲೂಕು ಆರೋಗ್ಯಾಧಿಕಾರಿಗಳು ಹಗೂ ವೈದ್ಯಾಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐತಿಹಾಸಿಕ ನಾಡು ರಾಯಚೂರಿನಲ್ಲಿ ಬಹುದಿನಗಳ ನಂತರ ಜರುಗುತ್ತಿರುವ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಮೇಲಿಂದ ಮೇಲೆ ಸಭೆ ನಡೆಸಿ ಸಿದ್ಧತೆಗೆ ಸೂಚನೆ ನೀಡಿದ್ದಾರೆ. ಜನರ ಉತ್ಸವವನ್ನು ಇಮ್ಮಡಿಗೊಳಿಸುವ ದಿಶೆಯಲ್ಲಿ ಹಮ್ಮಿಕೊಂಡ ಎಲ್ಲ ಕಾರ್ಯಕ್ರಮಗಳಲ್ಲಿ ಜನರು ತಪ್ಪದೇ ಭಾಗಿಯಾಗಬೇಕು. ಈ ದಿಶೆಯಲ್ಲಿ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ಪ್ರಚಾರ ಕಾರ್ಯವನ್ನು ಅಚ್ಚುಕಟ್ಟಾಗಿ ನಡೆಸಲು ಸೂಚನೆ ನೀಡಿದರು.
ಜನತೆಗೆ ಪ್ರೇರೇಪಣೆಗಾಗಿ ಈಗಾಗಲೇ ದೇಸಿ ಕ್ರೀಡೆ, ಮ್ಯಾರಾಥಾನ್, ಸೈಕ್ಲಿಂಗ್, ದೇಹದಾರ್ಢ್ಯ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ಸವದ ಕಳೆ ಹೆಚ್ಚಿಸಲಾಗಿದೆ. ಅದರಂತೆ ಇನ್ಮುಂದೆಯು ಸಹ ಬೇರೆ ಬೇರೆ ಕಾರ್ಯಕ್ರಮಗಳಿವೆ. ಮಕ್ಕಳ ಉತ್ಸವ, ಆಹಾರ ಮೇಳ, ಗ್ಯಾರಂಟಿ ಮೇಳ, ಹೆಲಿಕ್ಯಾಪ್ಟರ್ ಮೂಲಕ ರಾಯಚೂರು ಹಾಗೂ ಸುತ್ತಲಿನ ಸ್ಥಳ ವೀಕ್ಷಣೆ, ಹೆಸರಾಂತ ಕಲಾವಿದರು, ನೃತ್ಯಪಟುಗಳಿಂದ ಪ್ರತಿದಿನ ಕೃಷಿ ವಿಶ್ವವಿದ್ಯಾಲಯದ ಆವರಣ, ಜಿಲ್ಲಾ ರಂಗಮಂದಿರ, ಮಹಿಳಾ ಸಮಾಜದ ಗ್ರೌಂಡ್, ವಾಲ್ಕಟ್ ಮೈದಾನ, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತವೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದೀತಾ ಎಮ್.ಎನ್., ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಗಣೇಶ್ ಕೆ, ಡಿಪಿಡಿಓ ಡಾ.ಚಂದ್ರಶೇಖರಯ್ಯ ಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಅಮೃತ್ ಹುಕ್ಕೇರಿ, ಡಿಹೆಚ್‌ಇಓ ಈಶ್ವರ ಹೆಚ್ ದಾಸಪ್ಪನವರ, ಡಿವೈಹೆಚ್‌ಇಓ ಬಸಯ್ಯ, ಡಿಪಿಎಮ್ ನವೀನ್ ಕುಮಾರ್, ಹೆಚ್‌ಐಓ ಸುರೇಶ್, ನಾಗರಾಜ್, ಜ್ಯೋತಿ, ಭಾರತಿ ಸೇರಿದಂತೆ ಇತರರು ಇದ್ದರು.
ಆರೋಗ್ಯ ಇಲಾಖೆಯಿಂದ ಕಾರ್ಯಕ್ರಮ: ಜಾಲಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ರಾಯಚೂರು ಉತ್ಸವದ ಕುರಿತು ಮಾಹಿತಿ ನೀಡಲಾಯಿತು.

Leave a Reply

Your email address will not be published. Required fields are marked *