ರಾಯಚೂರು ಜನವರಿ 26 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ವನ್ನು ಫೆ.05, ಫೆ.06 ಮತ್ತು ಫೆ.7ರಂದು ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಈ ಉತ್ಸವಕ್ಕೆ 5 ಲಕ್ಷ ರೂ. ದಿಂದ 10 ಲಕ್ಷ ರೂ.ಗಳ ಒಳಗೆ ಪ್ರಾಯೋಜಕತ್ವ ನೀಡುವವರಿಗೆ ರಾಯಚೂರು ಜಿಲ್ಲಾ ಉತ್ಸವದ ಬ್ಯಾನರನಲ್ಲಿ, ಎಲ್.ಇ.ಡಿ. ಸ್ಕ್ರೀನ್ನಲ್ಲಿ, ಪೋಸ್ಟರ್ ಹಾಗೂ ಸಾಮಾಜಿಕ ಜಾಲತಾಣದ ಪ್ರಚಾರಗಳಲ್ಲಿ ತಮ್ಮ ಲೋಗೋವನ್ನು ಅಳವಡಿಸಲಾಗುವುದು ಮತ್ತು ವಿ.ಐ.ಪಿ. ಪಾಸ್ ನೀಡಲಾಗುವುದು ಎಂದು ರಾಯಚೂರು ಉತ್ಸವ ಆಚರಣೆ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
10 ಲಕ್ಷ ರೂ.ಗಳ ಮೇಲ್ಪಟ್ಟು ಪ್ರಾಯೋಜಕತ್ವ ನೀಡುವವರಿಗೆ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮದಲ್ಲಿ ಭಾಗಿ ಮಾಡಲಾಗುವುದು. ಅಲ್ಲದೆ ವಿ.ಐ.ಪಿ. ಪಾಸ್ ನೀಡಿ ತಮ್ಮ ಭಾವಚಿತ್ರವನ್ನು ವೇದಿಕೆಯ ಮೇಲೆ ಇರುವ ಎಲ್.ಇ.ಡಿ. ಸ್ಕ್ರೀನ್ ನಲ್ಲಿ ಬಿತ್ತರಿಸಲಾಗುವುದು. ವಿವಿಧ ಕಾರ್ಯಕ್ರಮಗಳಲ್ಲಿ ಪ್ರಾಯೋಜಕತ್ವವನ್ನು ನೀಡಿರುವ ಮಹನೀಯರನ್ನು ಸ್ಮರಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಸಿದ್ದ ಕಲಾವಿದರೊಂದಿಗೆ ಸೆಲ್ಪಿ ಫೋಟೋ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮಳಿಗೆಗೆ ಅವಕಾಶ ಕಲ್ಪಿಸಲಾಗುವುದು ಹಾಗೂ ಪೋಸ್ಟರ್, ಸಾಮಾಜಿಕ ಜಾಲತಾಣದ ಪ್ರಚಾರಗಳಲ್ಲಿ ತಮ್ಮ ಲೋಗೋ ಅಳವಡಿಸಲಾಗುವುದು.
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಆಚರಣೆ ಕುರಿತು ಪ್ರಾಯೋಜಕತ್ವ ನೀಡಲು ಜಿಲ್ಲೆಯ ಎಲ್ಲಾ ಮಹನೀಯರಲ್ಲಿ ರಾಯಚೂರು ಉತ್ಸವ ಆಚರಣೆ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಕೋರಿ ಪ್ರಕಟಣೆ ಹೊರಡಿಸಿದ್ದಾರೆ.

