ಮಾನ್ವಿ : ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಠಾನಗೊಂಡಿರುವ ಚೆಕ್ ಡ್ಯಾಂ ಹಾಗೂ ಸಿ.ಸಿ ರಸ್ತೆ ಕಾಮಗಾರಿಗಳಲ್ಲಿ ತೀವ್ರ ಅಕ್ರಮಗಳು ಹಾಗೂ ಕಳಪೆ ಗುಣಮಟ್ಟ ಕಂಡುಬಂದಿರುವ ಹಿನ್ನೆಲೆಯಲ್ಲಿ, ಜನಸೇವಾ ಫೌಂಡೇಶನ್ ವತಿಯಿಂದ ತನಿಖೆ ನಡೆಸುವಂತೆ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜನಸೇವಾ ಫೌಂಡೇಶನ್ ಮಾನ್ವಿ ತಾಲೂಕು ಅಧ್ಯಕ್ಷ ತಾಜುದ್ದೀನ್ ಚೀಕಲಪರ್ವಿ ಅವರು, ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ರೂ.2 ಕೋಟಿ ಅನುದಾನದಲ್ಲಿ 2 ಚೆಕ್ ಡ್ಯಾಂಗಳಿಗೆ ಮಂಜೂರಾಗಿದ್ದರೂ, ವಾಸ್ತವದಲ್ಲಿ ಒಂದೇ ಚೆಕ್ ಡ್ಯಾಂ ಕಾಮಗಾರಿ ನಡೆದಿದ್ದು, ಮತ್ತೊಂದು ಚೆಕ್ ಡ್ಯಾಂ ಕಾಮಗಾರಿ ನಡೆಯದೇ ಇರುವ ಬಗ್ಗೆ ಗ್ರಾಮಸ್ಥರಲ್ಲಿ ಗಂಭೀರ ಅನುಮಾನಗಳು ಮೂಡಿವೆ.
ಅನುದಾನ ಬಿಡುಗಡೆ ಹಾಗೂ ಕಾಮಗಾರಿ ಸ್ಥಿತಿಗತಿಯ ಕುರಿತು ಸ್ಪಷ್ಟ ಮಾಹಿತಿ ಲಭ್ಯವಿಲ್ಲದಿರುವುದು ಸಾರ್ವಜನಿಕ ಹಣದ ದುರುಪಯೋಗಕ್ಕೆ ಸ್ಪಷ್ಟ ಸೂಚನೆಯಾಗಿದೆ ಎಂದು ಆರೋಪಿಸಿದರು.
ಅದೇ ರೀತಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸಿ.ಸಿ ರಸ್ತೆಗಳಲ್ಲೂ ಅಗತ್ಯ ತಾಂತ್ರಿಕ ಮಾನದಂಡಗಳನ್ನು ಪಾಲಿಸದೆ ಕಾಮಗಾರಿ ನಡೆಸಲಾಗಿದ್ದು, ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಕೆಲವೇ ದಿನಗಳಲ್ಲಿ ರಸ್ತೆಗಳು ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಗುಣಮಟ್ಟದ ಕೊರತೆಯಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ತಿಳಿಸಿದರು.
ಈ ಎಲ್ಲಾ ಕಾಮಗಾರಿಗಳ ಕುರಿತು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗಳ ಗುಣಮಟ್ಟದ ತಾಂತ್ರಿಕ ತಪಾಸಣೆ ನಡೆಸಬೇಕು. ಅನುದಾನ ಬಳಕೆಯ ಕುರಿತು ಸಮಗ್ರ ತನಿಖೆ ನಡೆಸಿ, ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಮಾನದಂಡದಂತೆ ಮರುಕಾಮಗಾರಿ ಕೈಗೊಳ್ಳುವಂತೆ ಸೂಕ್ತ ಆದೇಶ ನೀಡಬೇಕೆಂದು ಅವರು ಒತ್ತಾಯಿಸಿದರು.
ಜನರ ಹಣ ಜನರ ಹಿತಕ್ಕಾಗಿ ಬಳಸಲ್ಪಡಬೇಕು ಎಂಬ ಉದ್ದೇಶದಿಂದ ಈ ಮನವಿಯನ್ನು ಸಲ್ಲಿಸಲಾಗಿದ್ದು, ನ್ಯಾಯ ಒದಗಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಸಂಘಟನಾ ಕಾರ್ಯದರ್ಶಿ ಸಿದ್ದಾರೆಡ್ಡಿ, ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

