ತಾಳಿಕೋಟಿ: ಪಟ್ಟಣದ ಸರ್ಕಾರಿ ಕನ್ನಡ ಶಾಲೆ ಮೈದಾನದಲ್ಲಿ ತಾಲೂಕ ಆಡಳಿತದ ವತಿಯಿಂದ ಜನವರಿ 26ರಂದು ಆಚರಿಸಲಿರುವ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಸೋಮವಾರ ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕ ಮಟ್ಟದ ಅಧಿಕಾರಿಗಳ ಹಾಗೂ ಗಣ್ಯರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಮಾತನಾಡಿ ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬವಾಗಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಾವುದೇ ರೀತಿಯ ಲೋಪಗಳು ಆಗದಂತೆ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿ ಕಾರ್ಯಕ್ರಮದ ಯಶಸ್ವಿಗೆ ಸರ್ವ ಸಮಾಜದ ಗಣ್ಯರ ಸಹಕಾರವನ್ನು ಕೋರಿದರು. ಮುಂದುವರೆದು ಅವರು ಅಧಿಕಾರಿಗಳು ತಮಗೆ ವಹಿಸಿದ ಎಲ್ಲ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಕ್ರಮವಹಿಸಬೇಕು. ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪೂರ್ವದಲ್ಲಿಯೇ ತಿಳಿಸಬೇಕು. ವೇದಿಕೆ ಸಿದ್ಧತೆ, ಆಕರ್ಷಕ ಪಥಸಂಚಲನ, ಸನ್ಮಾನ, ಅಲ್ಪೋಪಹಾರದ ವ್ಯವಸ್ಥೆ, ಭದ್ರತಾ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಛತೆ, ದೀಪಾಲಂಕರದ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ನಿಗದಿತ ಸಮಯಕ್ಕೆ ಎಲ್ಲಾ ಅಧಿಕಾರಿಗಳು ಹಾಜರಿರಬೇಕು ಎಂದು ಹೇಳಿದರು. ಅಂದು ಬೆಳಿಗ್ಗೆ 8.30 ಘಂಟೆಗೆ ಕನ್ನಡ ಸರ್ಕಾರಿ ಶಾಲಾ ಮೈದಾನದಲ್ಲಿ ತಾಲೂಕ ಆಡಳಿತದಿಂದ ಧ್ವಜಾರೋಹಣ ನೆರವೇರಿಸಲು ತೀರ್ಮಾನಿಸಲಾಯಿತು. ಸಿ ಆರ್ ಸಿ ರಾಜು ವಿಜಾಪುರ ಕಾರ್ಯಕ್ರಮ ನಿರ್ವಹಿಸಿದರು. ಪೂರ್ವಭಾವಿ ಸಭೆಯಲ್ಲಿ ಪ್ರಮುಖರಾದ ಸಿದ್ದನಗೌಡ ಪಾಟೀಲ ನಾವದಗಿ, ಎಂ.ಜಿ. ಪಾಟೀಲ,ಪ್ರಭುಗೌಡ ಮದರಕಲ್ಲ, ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈ ಭೀಮ್ ಮುತ್ತಗಿ, ಗಂಗಾಧರ ಕಸ್ತೂರಿ, ಮಾಸೂಮಸಾಬ ಕೆಂಭಾವಿ,ಆರ್.ಎಂ.ಡೋಣಿ,ಸಂಗನಗೌಡ ಅಸ್ಕಿ, ಶಿವಣ್ಣ ಕಡಕೋಳ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ,ಇಸಿಓ ಸುರೇಶ ಹಿರೇಮಠ,ಎ.ಎಸ್.ಐ.ಡಿ.ಎಚ್.ಬಾಗೇವಾಡಿ,ಶಿರಸ್ತೆದಾರ ಜೆ.ಆರ್.ಜೈನಾಪೂರ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

