ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕಾಗಿ ತಾಲ್ಲೂಕಿನ ತಾಳಕನಕಾಪುರದ ನಿವಾಸಿ, 31 ವರ್ಷದ ಯುವಕ ಸಣ್ಣದುರ್ಗಪ್ಪ ಪರಿವರ್ 50 ಕೆ.ಜಿ. ತೂಕದ ಅಕ್ಕಿಚೀಲದ ಮೂಟೆಯನ್ನು ಹೊತ್ತು 16 ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ.
ಮಹಾದಾಸೋಹ ಜ. 1ರಂದು ಪ್ರಾರಂಭವಾಗಿ ಭಾನುವಾರ ಮುಕ್ತಾಯವಾಯಿತು.
ಹರಟುವಾಗ ಸ್ನೇಹಿತರು ಹಾಕಿದ ಸವಾಲು ಸ್ವೀಕರಿಸಿದ ಯುವಕ ಐದು ತಾಸು, ಅಕ್ಕಿಯ ಮೂಟೆಯನ್ನು ಹೊತ್ತು ಗವಿಮಠ ತಲುಪಿದರು.

ತಾಳಕನಕಾಪುರದಿಂದ ಭಾನುವಾರ ಬೆಳಿಗ್ಗೆ 6.40ಕ್ಕೆ ಪಾದಯಾತ್ರೆ ಆರಂಭಿಸಿದ ಯುವಕ ನಿರಂತರ 13 ಕಿ.ಮೀ. ನಡೆದು ಕೊಪ್ಪಳ ಸಮೀಪ ಬಂದಾಗ ಭಾರ ಇಳಿಸಿ ಎಳನೀರು ಸೇವಿಸಿದರು. ಹತ್ತು ನಿಮಿಷ ವಿಶ್ರಾಂತಿ ಪಡೆದು ಉಳಿದ ಮೂರು ಕಿ.ಮೀ. ಕ್ರಮಿಸಿದ್ದು, ಬೆಳಿಗ್ಗೆ 11.40ರ ಸುಮಾರಿಗೆ ಗವಿಮಠವನ್ನು ತಲುಪಿದರು.

ಒಂದೆಡೆ ಬಿಸಿಲು, ಮತ್ತೊಂದೆಡೆ ರಸ್ತೆಯಲ್ಲಿ ವಾಹನ ಸಂಚಾರದ ಅಡೆತಡೆಗಳನ್ನು ದಾಟಿ ಜೊತೆಯಲ್ಲಿದ್ದ ಸ್ನೇಹಿತರು ಹಾಗೂ ಗವಿಮಠದ ಮೇಲಿನ ಭಕ್ತಿಯಿಂದಾಗಿ ಮೂಟೆ ಹೊರುವ ಸಂಕಲ್ಪ ಪೂರ್ಣಗೊಳಿಸಿದ್ದಾರೆ. ವಿಷಯ ತಿಳಿದ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಣ್ಣದುರ್ಗಪ್ಪ ಅವರನ್ನು ಸನ್ಮಾನಿಸಿದರು.

ಸಣ್ಣದುರ್ಗಪ್ಪ ಹಿಂದೆ ತಮ್ಮೂರಿನಿಂದ ಮೂರ್ನಾಲ್ಕು ಕಿ.ಮೀ. ದೂರವಿರುವ ಗ್ರಾಮಗಳಿಗೆ ರಸಗೊಬ್ಬರದ ಚೀಲಗಳನ್ನು ಹೊತ್ತು ಇದೇ ರೀತಿಯ ಸಾಹಸ ಮಾಡಿದ್ದರು.

‘ಮೂಟೆ ಹೊತ್ತು ಹೋಗಲು ಸಾಧ್ಯವಿಲ್ಲ ಎಂದು ನಮ್ಮೂರಿನಲ್ಲಿ ಗೇಲಿಮಾಡಿದ್ದರು. ಸವಾಲನ್ನು ರಾತ್ರೋ ರಾತ್ರಿ ನಿರ್ಧರಿಸಿ ಬೆಳಿಗ್ಗೆ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ್ದೇನೆ’ ಎಂದು ಹೇಳಿದಾಗ ಅವರ ಮೊಗದ ಮೇಲೆ ಸಂತಸವಿತ್ತು.

18 ದಿನಗಳಲ್ಲಿ 28 ಲಕ್ಷ ಜನರಿಗೆ ದಾಸೋಹ

ಕೊಪ್ಪಳ: ಗವಿಮಠದ ಜಾತ್ರೆಯ ಮಹಾದಾಸೋಹದ 18 ದಿನಗಳಲ್ಲಿ ಕನಿಷ್ಠ 28ರಿಂದ 30 ಲಕ್ಷ ಭಕ್ತರು ಊಟ ಮಾಡಿದ್ದಾರೆ. ‘ಈ ಬಾರಿ ಜಾತ್ರೆಯ ಆರಂಭದಿಂದ ಕೊನೆ ದಿನದ ತನಕವೂ ಸತತವಾಗಿ ಭಕ್ತರು ಬಂದಿದ್ದಾರೆ. 18ರಿಂದ 20 ಲಕ್ಷ ಜೋಳದ ರೊಟ್ಟಿಗಳು ಖರ್ಚಾಗಿವೆ’ ಎಂದು ಗವಿಮಠದ ದಾಸೋಹದ ಉಸ್ತುವಾರಿ ರಾಮನಗೌಡರ್‌ ತಿಳಿಸಿದ್ದಾರೆ.

Leave a Reply

Your email address will not be published. Required fields are marked *