ಸೋಂಕಿತ ಕ್ಯುಲೇಕ್ಸ್‌ ಸೊಳ್ಳೆಯ ಕಚ್ಚುವಿಕೆಯಿಂದ ಹರಡುವ ಹಾಗೂ ಒಮ್ಮೆ ಬಂದರೆ ಜೀವನ ಪರ್ಯಂತ ಕಾಡುವ ಆನೆಕಾಲು ರೋಗವನ್ನು ಆರಂಭದಲ್ಲಿಯೇ ತಡೆಗಟ್ಟಲು ರಾತ್ರಿ ವೇಳೆ ಆರೋಗ್ಯ ಇಲಾಖೆಯಿ‌ಂದ ಕೈಗೊಳ್ಳುವ ರಕ್ತಲೇಪನ ಕಾರ್ಯಕ್ಕೆ ಜನತೆ ಸಹಕರಿಸಿ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ ಅಯ್ಯನಗೌಡ ತಿಳಿಸಿದರು.
ಸಿಂಧನೂರು ನಗರದ, ಸುಕಾಲಪೇಟೆಯ ಜನತಾ ಕಾಲೋನಿಯಲ್ಲಿ ರಾತ್ರಿ ವೇಳೆ ಹಮ್ಮಿಕೊಂಡ ರಕ್ತಲೇಪನ ಕಾರ್ಯದ ಕುರಿತು ಮಾತನಾಡಿ ಸಮುದಾಯದಲ್ಲಿ ನಮ್ಮೊಂದಿಗೆ ಹಲವು ವಿಧದ ಸೊಳ್ಳೆಗಳು ಇದ್ದು ಅದರಲ್ಲಿ ಕ್ಯೂಲೆಕ್ಸ್ ಸೊಳ್ಳೆ, ಆನೆಕಾಲು ರೋಗ ಹೊಂದಿದ ವ್ಯಕ್ತಿಗೆ ಕಚ್ಚಿ ಅದೆ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗ ಬರಿಗಣ್ಣಿಗೆ ಕಾಣದ ‘ವುಚೆರೇರಿಯಾ ಬ್ಯಾಂಕ್ರೋಫ್ಟಿ’ ‘ಬ್ರೂಗಿಯಾ ಮಲಾಯಿ’ ಎಂಬ ಪರಾವಲಂಬಿ ನೂಲಿನಂತಹ ಹುಳುಗಳನ್ನು ಅವರ ದೇಹಕ್ಕೆ ವರ್ಗಾಯಿಸುತ್ತವೆ.
ಈ ಹುಳುಗಳು ರಕ್ತ ಮತ್ತು ದುಗ್ಧರಸನಾಳಗಳಲ್ಲಿ ಬೆಳೆದು, ದ್ರವ ಹರಿಯದಂತೆ ತಡೆಯುತ್ತವೆ, ಇದರಿಂದ ಕೈ ಕಾಲುಗಳು ಆನೆಯ ಕಾಲಿನಂತೆ ದಪ್ಪವಾಗುವ ಮೂಲಕ ಶಾಶ್ವತವಾಗಿ ಆನೆಕಾಲು ರೋಗಕ್ಕೆ ಕಾರಣವಾಗುತ್ತಿದ್ದು, ಜಿಲ್ಲೆಯಲ್ಲಿ ರೋಗ ತಡೆಗಾಗಿ ಹಾಗೂ ಆರಂಭದಲ್ಲಿಯೇ ಗುರ್ತಿಸಲು ಮೇಲಾಧಿಕಾರಿಗಳ ನಿರ್ದೇಶನದಂತೆ ಆಯ್ದ ಗ್ರಾಮಗಳಲ್ಲಿ ರಾತ್ರಿ ವೇಳೆ ರಕ್ತ ಲೇಪನ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮೇರಿ ಮಾತನಾಡಿ, ಸಾಮಾನ್ಯವಾಗಿ ಆನೆಕಾಲು ರೋಗ ವ್ಯಕ್ತಿಯಲ್ಲಿ ಕಂಡುಬರಲು ಧಿರ್ಘಾವಧಿ ತೆಗೆದುಕೊಳ್ಳುತ್ತದೆ. ಆರಂಭದಲ್ಲಿ ಜ್ವರ ಮತ್ತು ಚಳಿ, ಚರ್ಮದ ಮೇಲೆ ಸೋಂಕು ಹಾಗೂ ಕಾಲುಗಳು, ತೋಳುಗಳು, ಸ್ತನಗಳು ಅಥವಾ ಜನನಾಂಗದ ಭಾಗಗಳಲ್ಲಿ ಊತ ಕಂಡುಬರುತ್ತದೆ.
ಕ್ರಮೇಣ ಚರ್ಮವು ದಪ್ಪವಾಗಿ, ಗಟ್ಟಿಯಾಗಿ, ಗರುಸಾಗಿ ಆನೆ ಚರ್ಮದಂತೆ ಕಾಣಿಸುವುದು. ಇದರಿಂದ ಅತಿಯಾದ ನೋವು ಮತ್ತು ನಡೆಯಲು ಕಷ್ಟವಾಗುವುದು. ಇದನ್ನು ರೋಗ ಲಕ್ಷಣಗಳನುಸಾರ ನಿರ್ವಹಣೆ ಚಿಕಿತ್ಸೆ ಮಾತ್ರ ಸಾಧ್ಯವಿದ್ದು, ಸಂಪೂರ್ಣ ಗುಣಪಡಿಸಲು ಕಷ್ಟಕರ. ಈ ಹಿನ್ನಲೆ ಮನೆಯ ಸುತ್ತಲು ಚರಂಡಿ, ತಿಪ್ಪೆಗಳ ಹತ್ತಿರ ಅನುಪಯುಕ್ತ ನೀರು ನಿಲ್ಲದಂತೆ ಹಾಗೂ ಮನೆ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವಾಗ ಸೊಳ್ಳೆಯಿಂದ ಕಚ್ಚಿಸಿಕೊಳ್ಳದಂತೆ ಜಾಗೃತಿ ವಹಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ 100 ಜನರ ಮೇಲೆ ರಕ್ತ ಲೇಪನವನ್ನು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶಾಂತಾ, ಆಶಾ ಕಾರ್ಯಕರ್ತೆಯರಾದ ರಾಜಮಾ, ರೇಣುಕಾ ಅನುಪಮಾ, ಸರಸ್ವತಿ, ಶೋಭಾ, ರೇಣುಕಾ, ಸಾಜನ್‌, ತಂಡದ ಮೂಲಕ ಕೈಗೊಂಡರು.

Leave a Reply

Your email address will not be published. Required fields are marked *