ಮುದಗಲ್ : ಸಮೀಪದ ತೊಂಡಿಹಾಳ ಗ್ರಾಮದ ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ಶನಿವಾರ ರಾತ್ರಿ ಸಾವಿರಾರು ಕುರಿಗಳ ಮಾರಣ ಹೋಮ ನಡೆದಿದೆ.
ದೇವರ ಹೆಸರಲ್ಲಿ ನೆಡೆಯುವ ಪ್ರಾಣಿ ಬಲಿ, ಮದ್ಯಪಾನ ನಿಷೇಧ ಸೇರಿದಂತೆ ಅನೇಕ ಅನಿಷ್ಠ ಪದ್ಧತಿಗಳನ್ನು ನಿಷೇಧಿಸಿ ಜಿಲ್ಲಾ, ತಾಲ್ಲೂಕು ಆಡಳಿತ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ರಾತ್ರಿಯಿಡಿ ಗಸ್ತು ತಿರುಗಿದರೂ, ತಡೆಯಲು ಸಾಧ್ಯವಾಗಲಿಲ್ಲ.
ಪ್ರತಿ ವರ್ಷದಂತೆ ಯಥಾವತ್ತಾಗಿ ಪ್ರಾಣಿ ಬಲಿ, ಮದ್ಯ ಸೇವನೆ ಸೇರಿದಂತೆ ಅನೇಕ ಅನಿಷ್ಠ ಪದ್ಧತಿಗಳು ಜಾರಿಯಲ್ಲಿರುವುದು ಕಂಡು ಬಂತು.

ಕೃಷ್ಣಾ ನದಿ ದಡದಲ್ಲಿ ನೆಲೆಸಿರುವ ತೊಂಡಿಹಾಳ ಗ್ರಾಮದ ಹುಲಿಗೆಮ್ಮದೇವಿ ಜಾತ್ರೆಗೆ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ರಾಜ್ಯದ ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ, ಸಿರುಗುಪ್ಪ, ಹೊಸಪೇಟೆ, ಕೊಪ್ಪಳ, ಸುರಪುರ, ಶಹಾಪುರ, ಬಳ್ಳಾರಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಭಕ್ತರು ಹರಕೆ ತೀರಿಸಲು ಮೇಕೆ, ಕುರಿ, ಕೋಳಿಗಳನ್ನು ಬಲಿಕೊಟ್ಟರು. ಉರುಳು ಸೇವೆ ಮೂಲಕ ಹರಕೆ ತೀರಿಸಿದರು.

ರಾತ್ರಿ 10 ಗಂಟೆಗೆ ಆರಂಭವಾದ ಪ್ರಾಣಿಗಳ ಬಲಿಕೊಡುವಿಕೆ ಬೆಳಿಗ್ಗೆ 5 ಗಂಟೆವರೆಗೂ ನಡೆಯಿತು. ಲಿಂಗಸುಗೂರು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ನೇತೃತ್ವದಲ್ಲಿ ತಾಲ್ಲೂಕಿನ ವಿವಿಧ ಇಲಾಖೆ ಅಧಿಕಾರಿಗಳಾದ ತಹಶೀಲ್ದಾರ್ ಸತ್ಯಮ್ಮ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಬಕಾರಿ ಇಲಾಖೆ ಪಶುಸಂಗೋಪನೆ, ಲೋಕೋಪಯೋಗಿ, ಅರಣ್ಯ ಇಲಾಖೆ, ತಾಲ್ಲೂಕು ಹಾಗೂ ಜಿ.ಪಂ ಸೇರಿದಂತೆ ವಿವಿಧ ಅಧಿಕಾರಿಗಳನ್ನು ಜಾತ್ರೆಗೆ ನಿಯೋಜಿಸಿದ್ದರು.

ಆದರೆ ಪ್ರಾಣಿ ಬಲಿ, ಅಕ್ರಮ ಮದ್ಯ ಮಾರಾಟದಂತಹ ಅನಿಷ್ಠ ಪದ್ಧತಿಗಳು ಎಗ್ಗಿಲ್ಲದೆ ನಡೆದವು. ಅಧಿಕಾರಿಗಳು ಕಣ್ಣಿಗೆ ಕಂಡರೂ ಕಾಣದಂತಿದ್ದರು.

Leave a Reply

Your email address will not be published. Required fields are marked *