ಮಾನ್ವಿ – ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವ ದುರ್ಗತಿ ಯಾವ ದೇಶಕ್ಕೂ ಬರಬಾರದು. ಪ್ರತಿಯೊಬ್ಬರೂ ಶಿಕ್ಷಣದ ಮಹತ್ವ ಅರಿತು ಸಮಾಜಕ್ಕೆ ತಕ್ಕ ನ್ಯಾಯ ಒದಗಿಸಬೇಕು ಎಂದು ಸಾಹಿತಿ ರಮೇಶಬಾಬು ಯಾಳಗಿ ಅವರು ಹೇಳಿದರು.ಅವರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಸರಕಾರಿ ಮೆಟ್ರಿಕ್ ನಂತರ (ಪಿಯುಸಿ) ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಬೀಳ್ಕೂಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕವಾಗಿ ನಾವು ಪ್ರಗತಿ ಸಾಧಿಸದಿದ್ದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಗತಿ ಹೊಂದಲು ಸಾಧ್ಯವಿಲ್ಲ. ಅದ್ದರಿಂದ ವಿದ್ಯಾರ್ಥಿಗಳೆಲ್ಲರೂ ಸತತ ಅಭ್ಯಾಸದಲ್ಲಿ ತೊಡಗಿ ಉತ್ತಮ ಫಲಿತಾಂಶ ಪಡೆಯಬೇಕು. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಯೇ ಇರುತ್ತದೆ. ಪರೀಕ್ಷೆಗೆ ದಿನಗಳು ಹತ್ತಿರ ಬರುತ್ತಿವೆ. ಸಮಯಪ್ರಜ್ಞೆ ಬೆಳೆಸಿಕೊಂಡು, ಅಚಲ ಶ್ರದ್ಧೆಯಿಂದ, ಬಿಡದ ಛಲದಿಂದ, ಆತ್ಮವಿಶ್ವಾಸದಿಂದ ಜೀವನದಲ್ಲಿ ಏನಾದರೂ ಸಾಧಿಸಿ ಹೆತ್ತವರಿಗೆ, ಶಿಕ್ಷಕರಿಗೆ ಗೌರವ ತರಬೇಕು ಎಂದು ವಿದ್ಯಾರ್ಥಿನಿಯರಿಗೆ ಯಾಳಗಿ ಅವರು ಕರೆ ನೀಡಿದರು. ನಿಲಯ ಪಾಲಕರಾದ
ಮಂಜುಳಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಡುಗೆಯವರಾದ ದೀಪಾ, ವಿಜಯಶಾಂತಿ, ಶಾರದಾ, ಆಶಾ, ರೇಣುಕಾ, ಅಂಬಮ್ಮ, ಈರಮ್ಮ, ಸರೋಜಮ್ಮ, ನೂರ್ ಜಾಹನ್, ಹುಚ್ಚಣ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

