ಮಾನ್ವಿ: ಪಟ್ಟಣದ ಅಕ್ಬರಿ ಮಸ್ಜಿದ್ ಹಿಂದಿನ ಅವರಣದಲ್ಲಿ ದಾರುಸ್ಸಲಾಮ್ ಫೌಂಡೇಷನ್ ಟ್ರಸ್ಟ್ ವತಿಯಿಂದ 111 ಜೋಡಿ ಮುಸ್ಲಿಂ ಸಮುದಾಯದವರ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು, ದಾರುಸ್ಸಲಾಮ್ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷರಾದ ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರು ತಮ್ಮ ಪುತ್ರನ ವಿವಾಹವನ್ನು ಅತ್ಯಂತ ಸರಳವಾಗಿ ಸಾಮೂಹಿಕ ವಿವಾಹದ ಜೊತೆಗೆ ಆಚರಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಇಂತಹ ದುಂದು ವೆಚ್ಚದ ಮದುವೆಗಳ ಕಾಲದಲ್ಲಿ 111 ಜೋಡಿಗಳೊಂದಿಗೆ ಸರಳವಾಗಿ ವಿವಾಹ ಆಚರಿಸುವುದು ಶ್ಲಾಘನೀಯ ಕಾರ್ಯವಾಗಿದ್ದು, ಇಂತಹ ಸಾಮಾಜಿಕ ಕಾರ್ಯಕ್ರಮಗಳಿಂದ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ದಾರಿ ತೆರೆದುಕೊಳ್ಳಲಿದೆ ಎಂದರು. ವಿವಾಹವಾದ ದಂಪತಿಗಳ ಭವಿಷ್ಯ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ಹಣದಿಂದ ಮಾತ್ರ ಸಾಧ್ಯವಿಲ್ಲ, ಸಾಮಾಜಿಕ ಕಾರ್ಯಕ್ರಮಗಳಿಂದಲೇ ನಿಜವಾದ ಬದಲಾವಣೆ ಸಾಧ್ಯ ಎಂದು ಹೇಳಿದರು. ಉಚಿತ ಸಾಮೂಹಿಕ ವಿವಾಹಗಳು ದುಂದು ವೆಚ್ಚವನ್ನು ಕಡಿಮೆ ಮಾಡಿ ಬಡ ಕುಟುಂಬಗಳಿಗೆ ನೆರವಾಗುತ್ತವೆ. ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿವಾಹಿತ ದಂಪತಿಗಳು ಮಿತ ಸಂತಾನ, ಆದರ್ಶ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ–ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಮಾತನಾಡಿ, ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರು ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಬಡವರಿಗೆ ಮಾಸಿಕ ನೆರವು, ಬಡ್ಡಿರಹಿತ ಸಾಲ, ಶಿಕ್ಷಣ ಹಾಗೂ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಶಾಸಕರ ಅವಧಿಯಲ್ಲಿ ಅಲ್ಪಸಂಖ್ಯಾತರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ 1 ಕೋಟಿ ರೂ. ವೆಚ್ಚದಲ್ಲಿ ಈದ್ಗಾ ಶಾದಿ ಮಹಲ್ ನಿರ್ಮಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಹಂಪಯ್ಯನಾಯಕ, ವಿಧಾನಪರಿಷತ್ ಸದಸ್ಯ ವಸಂತಕುಮಾರ, ಮಾಜಿ ಸಚಿವ ಶಿವನಗೌಡ ನಾಯಕ, ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪನಾಯಕ, ಗಂಗಾಧರ ನಾಯಕ, ಬಸವನಗೌಡ ಬ್ಯಾಗವಾಟ, ಪ್ರತಾಪಗೌಡ ಪಾಟೀಲ್, ರಾಜಶೇಖರ ನಾಯಕ ಸೇರಿದಂತೆ ಹಲವರು ಮಾತನಾಡಿದರು.
ಈ 111 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಉದ್ಯಮಿಯಾದ ಸೈಯದ್ ಅಕ್ಬರ್ ಪಾಷಾ ಹುಸೇನಿ ಅವರ ಪುತ್ರ ಸೈಯದ್ ಆತಿಫ್ ಆದ್ನಾನ್ ಅವರ ವಿವಾಹವೂ ನೆರವೇರಿತು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ್ಯೂ ದೆಹಲಿಯ ಉಪಾಧ್ಯಕ್ಷರಾದ ಮೌಲಾನಾ ವಲಿಯುಲ್ಲಾ ಸಯೀದಿ ಫಲಾಹಿ, ರಾಜ್ಯ ಕಾರ್ಯದರ್ಶಿ ಹಾಗೂ ಮಂಗಳೂರಿನ ಶಾಂತಿ ಪ್ರಕಾಶನದ ಅಧ್ಯಕ್ಷರಾದ ಮಹಮ್ಮದ್ ಕುನ್ಹಿ, ಧರ್ಮಗುರುಗಳಾದ ಸೈಯದ್ ಸಜ್ಜದ್ ಮತವಾಲೆ, ಖಾಲಿದ್ ಗುರು, ಶೇಖ್ ಫರೀದ್ ಉಮ್ರಿ, ರವಿ ಬೋಸರಾಜು, ನಯೋಪ್ರ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಬಿ.ಕೆ. ಅಂಬರೀಶಪ್ಪ, ವಕೀಲರು, ಮುಖಂಡರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *