ರಾಯಚೂರು ಜನವರಿ 17 (ಕರ್ನಾಟಕ ವಾರ್ತೆ): ಜಿಲ್ಲಾಡಳಿತದಿಂದ ಸವಿತಾ ಮಹರ್ಷಿ ಜಯಂತಿಯನ್ನು ಇದೇ ಜನವರಿ 27ರಂದು ಆಚರಣೆ ಮಾಡಲಾಗುತ್ತಿದ್ದು, ಜಯಂತಿ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯ ತಹಶಿಲ್ದಾರ್ ಜಗದೀಶ್ ಅವರು ಹೇಳಿದರು.
ಜನವರಿ 16ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸವಿತಾ ಮಹಿರ್ಷಿ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸವಿತಾ ಮಹರ್ಷಿ ಜಯಂತಿ ನಿಮಿತ್ತ ಸವಿತಾ ಮಹರ್ಷಿ ಭಾವಚಿತ್ರದ ಮೆರವಣಿಗೆಯು ಕಲಾ ತಂಡಗಳೊಂದಿಗೆ ಜನವರಿ 27ರಂದು ಬೆಳಿಗ್ಗೆ 09 ಗಂಟೆಗೆ ನಗರದ ಗೋವಿಂದ ರಾಜ್ ಪೆಟ್ರೋಲ್ ಬಂಕ್ ಹತ್ತಿರವಿರುವ ಸವಿತಾ ಮಹರ್ಷಿ ವೃತ್ತದಿಂದ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರದ ರಂಗಮಂದಿರದವರೆಗೆ ಸಾಗಲಿದೆ. ಈ ನಿಮಿತ್ತ ನಗರದ ಪ್ರಮಖ ರಸ್ತೆಗಳನ್ನು ಶುಚಿಗೊಳಿಸಬೇಕು. ಎಲ್ಲಾ ವೃತ್ತಗಳನ್ನು ಅಲಂಕಾರಗೊಳಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಿಗ್ಗೆ 11ಕ್ಕೆ ಜಿಲ್ಲಾ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ರಂಗಮಂದಿರದ ಸುತ್ತಲಿನ ಪರಿಸರವನ್ನು ಶುಚಿಯಾಗಿಡಬೇಕು. ಅಲಂಕಾರಗೊಳಿಸಬೇಕು. ಸೇರುವ ಜನತೆಗೆ ಅನುಕೂಲವಾಗುವಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಸವಿತಾ ಮಹರ್ಷಿ ಜಯಂತಿ ನಿಮಿತ್ತ ಉಪನ್ಯಾಸ, ಆಹ್ವಾನ ಪತ್ರಿಕೆ ವಿತರಣೆ ಸೇರಿದಂತೆ ಎಲ್ಲಾ ಸಿದ್ಧತಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಯಾ ಗ್ರಾಮ ಪಂಚಾಯತಗಳಲ್ಲಿ ದಿನಾಚರಣೆಯು ಕಡ್ಡಾಯವಾಗಿ ಆಚರಣೆ ಆಗಬೇಕು. ಜಿಲ್ಲಾ ಮಟ್ಟದ ಹಾಗೂ ರಾಯಚೂರು ತಾಲೂಕುಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಪ್ಪದೇ ಭಾಗಿಯಾಗಬೇಕು. ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಸವಿತಾ ಮಹರ್ಷಿ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಿ.ಗೋವಿಂದ್, ಶ್ರೀನಿವಾಸ್, ಬಸವರಾಜ, ಎ.ಎಸ್.ರಾಮು, ಆನಂದ, ಎನ್.ವೆಂಕಟ್, ಎಸ್.ಅನಿಲ್ ಕುಮಾರ್, ಡಿ.ನಾಗರಾಜ್, ಜಿ.ಆನಂದ, ಚಂದ್ರಶೇಖರ, ಸುರೇಶ
ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ಮಲ್ಲೇಶ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳಾದ ದ್ರಾಕ್ಷಿ, ವಿನೋದ್ ಇನ್ನೀತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *