ರಾಯಚೂರು ಜನವರಿ 16 (ಕ.ವಾ.): ರಾಯಚೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ ಐತಿಹಾಸಿಕ ರಾಯಚೂರು ಕೋಟೆಯ ದೀಪಾಲಂಕಾರ ಕಾಮಗಾರಿಗೆ ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಜನವರಿ 16ರಂದು ಚಾಲನೆ ನೀಡಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಪ್ರವೇಶ ದ್ವಾರದ ಕೋಟೆ ಪ್ರದೇಶದ ಬಯಲು ಗ್ರಂಥಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಯಚೂರು ಮಹಾನಗರ ಪಾಲಿಕೆಯಿಂದ ಈಗಾಗಲೇ ರಾಯಚೂರು ಸಿಟಿಯ ಸೌಂದರ್ಯೀಕರಣ ಕಾರ್ಯ ಆರಂಭಗೊಂಡಿದೆ. ಸ್ವಚ್ಛತೆಯ ಬಗ್ಗೆ ಸಿಟಿ ಜನರಲ್ಲಿ ಜಾಗೃತಿ ಮೂಡಿಸಲು ಸಿಟಿಯ ಪ್ರಮುಖ ರಸ್ತೆಗಳಲ್ಲಿ ಸೌಂದರ್ಯ ಮತ್ತು ಶುಚಿತ್ವದ ಸಂದೇಶಕ್ಕಾಗಿ ಗೋಡೆಗಳ ಮೇಲೆ ಚಿತ್ರಪಟ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆದಿದೆ. ಇದೀಗ ಕೋಟೆಗೆ ದೀಪಾಲಂಕಾರಕ್ಕು ಕಾರ್ಯಯೋಜನೆ ರೂಪಿಸಲಾಗಿದೆ. ರಾಯಚೂರು ಉತ್ಸವ ನಿಗದಿಯಾಗಿದ್ದರಿಂದಲು ಸಹ ರಾಯಚೂರು ಸಿಟಿಯನ್ನು ಹಬ್ಬದ ರೀತಿಯಲ್ಲಿ ಸಿಂಗಾರಗೊಳಿಸಲು ಸಹ ಯೋಜಿಸಿ ಜಿಲ್ಲಾಡಳಿತದ ಸಹಯೋಗದಿಂದಿಗೆ ಈ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಇದೆ ವೇಳೆ ಸಚಿವರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್, ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ, ಮಾನ್ವಿ ಶಾಸಕರಾದ ಹಂಪಯ್ಯ ನಾಯಕ, ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಕ್ಷಂ ಗಿರಿ ಹಾಗೂ ಇನ್ನೀತರ ಗಣ್ಯ ಮಹನಿಯರು ಇದ್ದರು.


