ರಾಯಚೂರು ಜನವರಿ 16 (ಕ.ವಾ.): ರಾಯಚೂರು ಜಿಲ್ಲೆಯ ಐತಿಹಾಸಿಕ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯ ಅನಾವರಣಕ್ಕಾಗಿ ರಾಯಚೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನವರಿ 29ರಿಂದ ಮೂರು ದಿನಗಳ ಕಾಲ ನಿಗದಿಯಾಗಿದ್ದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ನ್ನು ಒಂದು ವಾರಕ್ಕೆ ಮುಂದೂಡಲಾಗಿದೆ.
ಜನವರಿ 16ರಂದು ರಾಯಚೂರು ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು, ಮಾವಿನಕೆರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಯಚೂರು ಜಿಲ್ಲಾ ಉತ್ಸವವನ್ನು ಜನವರಿ 29, 30 ಹಾಗೂ 31ರಂದು ನಡೆಸಬೇಕು ಎಂದು ನಿರ್ಧರಿಸಿ ಸಿದ್ಧತೆ ಮಾಡಲಾಗುತ್ತಿತ್ತು. ಆದರೆ, ಜನವರಿ 22ರಿಂದ ವಿಧಾನ ಮಂಡಲ ಅಧಿವೇಶನ ನಡೆಸಬೇಕು ಎನ್ನುವ ಸಚಿವ ಸಂಪುಟದ ನಿರ್ಣಯಕ್ಕೆ ರಾಜ್ಯಪಾಲರು ಅಂಗೀಕರಿಸಿದ್ದರಿಂದಾಗಿ ಕರ್ನಾಟಕ ವಿಧಾನ ಮಂಡಲ ಕಲಾಪವು ತುರ್ತಾಗಿ ನಿಗದಿಯಾದ ಹಿನ್ನೆಲೆಯಲ್ಲಿ ಎಲ್ಲ ಸಚಿವರು ಮತ್ತು ಶಾಸಕರು ಕಲಾಪದಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ಸವವನ್ನು ಮುಂದಿನ ತಿಂಗಳು ಫೆಬ್ರವರಿ 5ರಿಂದ ಮೂರು ದಿನಗಳ ಕಾಲ ನಡೆಸಲಾಗುವುದು ಎಂದು ಸಚಿವರು ಹೊಸ ದಿನಾಂಕ ಪ್ರಕಟಿಸಿದರು.
ಉತ್ಸವವನ್ನು ಫೆ.6ರಿಂದ ಮೂರು ದಿನಗಳ ಕಾಲ ನಡೆಸಲು ಯೋಜಿಸಲಾಗಿತ್ತಾದರೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಫೆ.8ರಿಂದ ವಾಲ್ಮೀಕಿ ಜಾತ್ರೋತ್ಸವ ಆಯೋಜನೆಯಾಗಿದ್ದರಿಂದಾಗಿ ಫೆ.6ರ ಬದಲಾಗಿ ಫೆ.5ರಿಂದ ಮೂರು ದಿನಗಳು ಫೆ.5, 6 ಮತ್ತು 7ರಂದು ಉತ್ಸವ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಎನ್.ಎಸ್.ಬೋಸರಾಜು, ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ, ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಎ.ವಸಂತಕುಮಾರ ಹಾಗೂ ಇನ್ನೀತರ ಗಣ್ಯ ಮಹನಿಯರು ಮತ್ತು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕುಮಾರ ಕಾಂದೂ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *