ನಮ್ಮ ಭಾರತೀಯ ಸನಾತನ
ಸಂಸ್ಕೃತಿಯಲ್ಲಿ ಹಬ್ಬಗಳು ವಿಶೇಷ ಮಹತ್ವವನ್ನು ಪಡೆದಿವೆ.
ಅದೇ ರೀತಿ ಹಿಂದುಗಳ ಹಬ್ಬಗಳಲ್ಲಿ ಮಕರ ಸಂಕ್ರಾಂತಿಗೆ ಪ್ರಾಮುಖ್ಯತೆ ಇದೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನವೇ ಮಕರ ಸಂಕ್ರಾಂತಿ.
ನೇಸರನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ದಿನವೇ ಮಕರ ಸಂಕ್ರಾಂತಿ ಈ ದಿನವನ್ನು ಉತ್ತರಾಯಣ ಪುಣ್ಯ ಕಾಲವೆಂದು ಕೂಡ ಕರೆಯುತ್ತಾರೆ. ಜನವರಿಯಿಂದ ವರುಷ ಆರಂಭದ ಮೊದಲ ಹಬ್ಬವೇ ಮಕರ ಸಂಕ್ರಾಂತಿ, ಜನವರಿ ತಿಂಗಳ 14ರಂದು ಅಥವಾ ಕೆಲವೊಮ್ಮೆ ಮಾತ್ರ 15ರಂದು ಮಕರ ಸಂಕ್ರಮಣವನ್ನು ಆಚರಿಸುತ್ತಾರೆ.
ಉತ್ತರಾಯಣದಿಂದ ಬೆಳಕು ಹೆಚ್ಚಾಗುವ ಕಾಲವಾಗಿದೆ ವೈಜ್ಞಾನಿಕವಾಗಿ ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಇದೆ.
ಚಳಿಗಾಲದಲ್ಲಿ ಮನುಷ್ಯನ ದೇಹದ ಚರ್ಮವು ಒಡೆದು ಹೋಗಿರುತ್ತದೆ. ಇದರಿಂದ ದೇಹಕ್ಕೆ ಎಣ್ಣೆ ಅಂಶವಿರುವ ಎಳ್ಳನ್ನು ಪುಡಿ ಮಾಡಿ ಅದರೊಂದಿಗೆ ಅರಿಶಿನವನ್ನು ಬೆರೆಸಿ ದೇಹಕ್ಕೆ ಹಚ್ಚಿಕೊಂಡು ಸ್ನಾನವನ್ನು ಮಾಡುತ್ತಾರೆ ಎಳ್ಳು ಮತ್ತು ಕೊಬ್ಬರಿ ಇವೆರಡರಲ್ಲಿ ಎಣ್ಣೆ ಅಂಶವಿರುವುದರಿಂದ
ಇವು ಶೀತ ವಾತಾವನ್ನು ದೂರ ಮಾಡುತ್ತದೆ. ಅದೇ ರೀತಿ ಚಳಿಗಾಲದಲ್ಲಿ ಪಚನ ಶಕ್ತಿ ಕಡಿಮೆಯಾಗಿರುವುದರಿಂದ ಈ ವೇಳೆಯಲ್ಲಿ ತಿನ್ನುವ ಕಬ್ಬು ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ.
ಸಂಕ್ರಾಂತಿಯು ರೈತರ ಹಬ್ಬವಾಗಿದೆ ರೈತರು ತಾವು ಬೆಳೆದ ಬೆಳೆಗಳನ್ನು ಕಟಾವು ಮಾಡಿ ಅಕ್ಕಿಯಿಂದ ಪೊಂಗಲ್ ಎಂಬ ಪದಾರ್ಥವನ್ನು ತಯಾರು ಮಾಡಿ ಸೂರ್ಯನಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ
ರೈತಾಪಿ ವರ್ಗವು ತಮ್ಮ ಜೊತೆಗಿದ್ದು ತಮ್ಮ ಕೃಷಿ ಚಟುವಟಿಕೆಗಳಲ್ಲಿ ತಮಗೆ ಸಹಾಯಕವಾಗಿರುವ ತಮ್ಮ ದನ ಕರುಗಳ ಮೈಯನ್ನು ತೊಳೆದು ಅವುಗಳಿಗೆ ಶೃಂಗಾರ ಮಾಡಿ ಕಿಚ್ಚು ಹಾಯಿಸುತ್ತಾರೆ.
ಕಿಚ್ಚು ಹಾಯಿಸುವ ಉದ್ದೇಶವಿಷ್ಟೇ ದನ ಕರುಗಳ ಮೈಗೆ ಅಂಟಿಕೊಂಡಿರುವ ಕೀಟಗಳು ಇದರಿಂದ ನಾಶವಾಗುತ್ತದೆ.
ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಜನರು ಪುಣ್ಯಕ್ಷೇತ್ರಗಳಿಗೆ ಹೋಗಿ ಪುಣ್ಯ ನದಿಗಳಲ್ಲಿ ಸ್ನಾನ ಮಾಡಿ ದೇವರ ದರ್ಶನವನ್ನು ಪಡೆದು ಕೃತಾರ್ಥರಾಗುತ್ತಾರೆ.
ತಮಗೂ ತಮ್ಮ ಕುಟುಂಬ ವರ್ಗಕ್ಕೂ ಉತ್ತರಾಯಣ ಪುಣ್ಯಕಾಲದ ಶುಭಾಶಯಗಳು.
