ಕೊಪ್ಪಳ : ನಗರದ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಶನಿವಾರ ರಜಾ ಹಿನ್ನೆಲೆ ಅಪಾರ ಭಕ್ತರು ಮಠದತ್ತ ಆಗಮಿಸಿ ಗವಿಸಿದ್ಧೇಶನ ದರ್ಶನ ಪಡೆದು ಪುನೀತರಾದರು.
ಜ.5ರಿಂದ ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಗುರುವಾರ ಹಾಗೂ ಶುಕ್ರವಾರ ಕೊಂಚ ಜನ ಸಂದಣಿ ತಗ್ಗಿತ್ತು.
ಎರಡನೇ ಶನಿವಾರ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಜನರು ಜಾತ್ರೆಗೆ ಆಗಮಿಸಿದರು. ಇದರಿಂದ ನಗರಾದ್ಯಂತ ಟ್ರಾಫಿಕ್ ಸಮಸ್ಯೆ ಹೆಚ್ಚಿತು. ಬಸವೇಶ್ವರ ವೃತ್ತ, ಅಶೋಕ ವೃತ್ತದಿಂದ ಹಿಡಿದು ಬಸ್ ನಿಲ್ದಾಣವರೆಗೂ ವಾಹನ ದಟ್ಟಣೆ ಕಂಡು ಬಂತು. ಗ್ರಾಮೀಣ ಭಾಗದ ಜನರು ಟ್ರ್ಯಾಕ್ಟರ್, ಬಂಡಿಗಳಲ್ಲಿ ಜಾತ್ರೆಗೆ ಬಂದರು. ಜನರು ಹೆಚ್ಚಿದ ಹಿನ್ನೆಲೆ ಮಹಾ ದಾಸೋಹ ಭವನದಲ್ಲೂ ಕಿಕ್ಕಿರಿದು ಜನ ಸೇರಿದರು.
ಮಾದಲಿ, ರೊಟ್ಟಿ, ಪಲ್ಯ, ಅನ್ನ&ಸಾಂಬಾರ್, ರವೆ ಉಂಡಿ, ಪುಡಿ, ಚಟ್ನಿ, ಉಪ್ಪಿನ ಕಾಯಿ ರುಚಿ ಸವಿದರು. ಅಧಿಕಾರಿ ವರ್ಗ, ಶಾಲಾ-ಕಾಲೇಜು ಮಕ್ಕಳು, ಮಹಿಳೆಯರು, ವೃದ್ಧರು ಸೇರಿ ಎಲ್ಲ ವರ್ಗದ ಜನರು ಬಂದರು. ಗವಿಸಿದ್ಧೇಶ್ವರ ಕತೃ ಗದ್ದುಗೆ, ಅಭಿನವ ಗವಿಶ್ರೀಗಳ ದರ್ಶನ ಪಡೆದರು. ಭಕ್ತರು ಹೆಚ್ಚಿದ್ದರಿಂದ ದರ್ಶನಕ್ಕೆ ಬಹುದೂರದವರೆಗೆ ಸರತಿ ಕಂಡುಬಂತು.
ಸೇವೆಗೈದ ಗವಿಶ್ರೀ

ಧಾರ್ಮಿಕ ಕಾರ್ಯಕ್ರಮಗಳು ಮುಗಿದ ಹಿನ್ನೆಲೆಯಲ್ಲಿ ಸದ್ಯ ಮಹಾ ದಾಸೋಹ ಮುಂದುವರೆದಿದೆ. ಸದಾ ಚಟುವಟಿಕೆಯಿಂದ ಇರುವ ಅಭಿನವ ಗವಿಶ್ರೀಗಳು ಶನಿವಾರ ಮಹಾದಾಸೋಹದಲ್ಲಿ ಕೆಲ ಗಂಟೆಗಳ ಕಾಲ ಸೇವೆ ಸಲ್ಲಿಸಿದರು. ಅಕ್ಕಿ ಚೀಲ ಹೊತ್ತರು. ಅಡುಗೆ ಮಾಡಿದರು. ಭಕ್ತರಿಗೆ ಪ್ರೀತಿಯಿಂದ ಪ್ರಸಾದ ಉಣಬಡಿಸಿದರು. ದರ್ಶನಕ್ಕೆ ಬಂದ ಚಿಕ್ಕ ಮಕ್ಕಳನ್ನು ಎತ್ತಿ ಮುದ್ದಾಡಿದರು. ಸೇವಾ ಕಾರ್ಯದಲ್ಲಿದ್ದ ಶಾಲಾ ಮಕ್ಕಳನ್ನು ತಬ್ಬಿ ಮುದ್ದಾಡಿ ಪ್ರೋತ್ಸಾಹಿಸಿದರು.

Leave a Reply

Your email address will not be published. Required fields are marked *