ರಾಯಚೂರು ಜನವರಿ 09 (ಕರ್ನಾಟಕ ವಾರ್ತೆ): ಹೆಣ್ಣು ಮಕ್ಕಳ ಜೀವನದಲ್ಲಿ ಗಂಭೀರತೆಯನ್ನು ಉಂಟು ಮಾಡುವ ಜೊತೆ ಜೊತೆಗೆ ಜೀವನಪೂರ್ತಿ ಕೊರಗುವಿಕೆಗೆ ಕಾರಣವಾಗುವ ಗರ್ಭಕಂಠದ ಕ್ಯಾನ್ಸರ್ ತಡೆಗೆ ರಾಜ್ಯ ಸರಕಾರವು ದಿಟ್ಟಹೆಜ್ಜೆ ಇಟ್ಟಿದ್ದು, 09 ರಿಂದ 14 ವರ್ಷದೊಳಗಿನ ಶಾಲಾ ಹೆಣ್ಣು ಮಕ್ಕಳಿಗೆ ಜಿಲ್ಲೆಯಲ್ಲಿ ಉಚಿತ ಹ್ಯೂಮನ್ ಪ್ಯಾಪಿಲೋಮ ವೈರಸ್ (ಹೆಚ್‌ಪಿವಿ) ಲಸಿಕೆಯನ್ನು ಹಾಕುವ ಕುರಿತು ಇಂದಿನಿಂದಲೇ ವ್ಯಾಪಕ ಮಾಹಿತಿಯನ್ನು ಶಾಲಾ ಮಟ್ಟದಲ್ಲಿ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಅವರು ಹೇಳಿದರು.
ಜನವರಿ 09ರ ಶುಕ್ರವಾರ ದಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಜರುಗಿದ ಹೆಚ್‌ಪಿವಿ ಲಸಿಕೆ ಕುರಿತು ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾನ್ಯವಾಗಿ ವೈಯಕ್ತಿಕ ಶುಚಿತ್ವ, ಜನನಾಂಗಗಳಲ್ಲಿ ತೊಂದರೆ, ಹುಣ್ಣು ಹಾಗೂ ಲೈಂಗಿಕ ಸಂಪರ್ಕದಿಂದ ಹರಡುವ ಹ್ಯೂಮನ್ ಪ್ಯಾಪಿಲೋಮವೈರಸ್ (ಹೆಚ್‌ಪಿವಿ) ಸೋಂಕು ನಿರಂತರವಾಗಿ ಇದ್ದು, ಕ್ರಮೇಣ ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆಗಳಾಗಿ ಕ್ಯಾನ್ಸರ್‌ರಾಗಿ ಬದಲಾಗುತ್ತದೆ ಎಂದರು.
ಈ ವೇಳೆ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್. ಅವರು ಮಾತನಾಡಿ, ಮುಖ್ಯವಾಗಿ ಧೂಮಪಾನ, ದುರ್ಬಲ ರೋಗ ನಿರೋಧಕ ಶಕ್ತಿ, ಜನನಾಂಗದ ಸೋಂಕು, ಬಹು ಲೈಂಗಿಕ ಪಾಲುದಾರಿಕೆಯು ಗರ್ಭಕಂಠದ ಕ್ಯಾನ್ಸರ್ ಕಾರಣವಾಗಬಹುದಾಗಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯಕ್ಕೆ ಮಾರಕವಾಗುವುದನ್ನು ತಡೆಯಲು ಹೆಚ್‌ಪಿವಿ ಲಸಿಕೆ ಮಹತ್ವಪೂರ್ಣವಾಗಿದೆ. ಮಾರ್ಗಸೂಚಿಯಡಿ 9 ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ವಯಸ್ಸಿಗನುಗುಣವಾಗಿ ಉಚಿತವಾಗಿ ಚುಚ್ಚುಮದ್ದು ರೂಪದಲ್ಲಿ ನೀಡುವುದನ್ನು ವ್ಯಾಪಕವಾಗಿ ಶಾಲಾ ಮಟ್ಟದಲ್ಲಿ ಹಾಗೂ ಪಾಲಕರಿಗೂ ಮಾಹಿತಿ ಒದಗಿಸಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ ಕೆ, ಜಿಲ್ಲಾ ಎನ್‌ಫೋರ್ಸ್ಮೆಂಟ್ ಅಧಿಕಾರಿ ಡಾ.ಶಿವಕುಮಾರ ನಾರಾ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಪ್ರಜ್ವಲ್ ಕುಮಾರ, ಮನೋವೈದ್ಯರು ಡಾ.ಮನೋಹರ್ ಪತ್ತಾರ, ಜಿಲ್ಲಾ ಆರೋಗ್ಯ ಶಿಕ್ಷಣಧಿಕಾರಿ ಈಶ್ವರ ಹೆಚ್. ದಾಸಪ್ಪವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಆಪ್ತ ಸಹಾಯಕರಾದ ಲೇಪಾಕ್ಷಯ್ಯ, ಐಎಫ್‌ವಿ ಕೊಪ್ರೇಶ್, ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳು, ತಾಲೂಕಾ ಮೇಲ್ವಿಚಾರಕರು, ಬಿಪಿಎಮ್, ಆಶಾ ಮೇಲ್ವಿಚಾರಕರು ಇದ್ದರು.


