ಹಿಂಬಾಗಿಲ NRC ಯಾಗಿರುವ SIR ವಿರುದ್ಧ ಜನಜಾಗೃತಿ ಹಾಗೂ ಎಸ್‌ಡಿಪಿಐ ಪಕ್ಷ ಸಮಾವೇಶ
ಸಿಂಧನೂರು: ಸಿಂಧನೂರು ನಗರದಲ್ಲಿ ಇಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಪಕ್ಷ ಸಮಾವೇಶ ಹಾಗೂ ಹಿಂಬಾಗಿಲ NRC ಯಾಗಿರುವ SIR ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಭಾನುವಾರ ಭಾರೀ ಸ್ಪಂದನೆಯೊಂದಿಗೆ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂಧನೂರು ವಿಧಾನಸಭಾ ಅಧ್ಯಕ್ಷರಾದ ಮೊಹಮ್ಮದ್ ಆಸಿಫ್ ಅವರು ವಹಿಸಿಕೊಂಡು ಮಾತನಾಡಿ, SIR ಪ್ರಕ್ರಿಯೆ ಬಡವರು, ಅಲ್ಪಸಂಖ್ಯಾತರು ಹಾಗೂ ಅಂಚಿನ ಸಮುದಾಯಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಆತಂಕ ವ್ಯಕ್ತಪಡಿಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮತದಾರರ ಹಕ್ಕು ಅತ್ಯಂತ ಪವಿತ್ರವಾಗಿದ್ದು, ಅದನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನಗಳನ್ನು ಜನತೆ ಒಗ್ಗಟ್ಟಿನಿಂದ ವಿರೋಧಿಸಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಳ ಅವರು ಮಾತನಾಡಿ, SIR ಅನ್ನು ಹಿಂಬಾಗಿಲ NRC ಯಂತೆ ಜಾರಿಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಇದರ ಮೂಲಕ ಲಕ್ಷಾಂತರ ಜನರ ಮತದಾರರ ಹಕ್ಕುಗಳನ್ನು ಕಿತ್ತುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು. ಜನರು ತಮ್ಮ ದಾಖಲೆಗಳ ಬಗ್ಗೆ ಜಾಗರೂಕರಾಗಿದ್ದು, ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಹೋರಾಡಬೇಕೆಂದು ತಿಳಿಸಿದರು.
ಇನ್ನಿತರ ಮುಖ್ಯ ಅತಿಥಿಗಳಾಗಿ ಅಕ್ಬರ್ ಹುಸೇನ್ ನಾಗುಂಡಿ, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಸಾಕಿಬ್, ಸಿಂಧನೂರು ವಿಧಾನಸಭಾ ಉಪಾಧ್ಯಕ್ಷ ಆಸಿಫ್ ಖುರೇಷಿ, ವಿಧಾನಸಭಾ ಕಾರ್ಯದರ್ಶಿ ಸಯ್ಯದ್ ಇರ್ಫಾನ್ ಅವರು ಮಾತನಾಡಿ, SIR ಪ್ರಕ್ರಿಯೆಯಲ್ಲಿರುವ ಗೊಂದಲಗಳು, ಜನರಲ್ಲಿ ಉಂಟಾಗಿರುವ ಭಯ ಹಾಗೂ ಇದರ ದೀರ್ಘಕಾಲೀನ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು. ಜನಜಾಗೃತಿ ಕಾರ್ಯಕ್ರಮಗಳು ಇಂತಹ ಸಂದರ್ಭಗಳಲ್ಲಿ ಅತ್ಯಂತ ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಹಾಗೂ ಪಟ್ಟಣಗಳಿಂದ ಆಗಮಿಸಿದ 200ಕ್ಕೂ ಹೆಚ್ಚು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಅವಧಿಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು, ಮತದಾರರ ಹಕ್ಕುಗಳು ಹಾಗೂ ಸಂವಿಧಾನ ರಕ್ಷಣೆಯ ಅಗತ್ಯತೆಯ ಕುರಿತು ಸ್ಪಷ್ಟ ಸಂದೇಶ ನೀಡಲಾಯಿತು.
ಕಾರ್ಯಕ್ರಮವು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ಸಂಪನ್ನವಾಯಿತು


