ಸಿಂಧನೂರು: ಜ 9 “ವಿವೇಕ ಸಪ್ತಾಹ” ಅಂಗವಾಗಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ
ರಾಮಕೃಷ್ಣ ವಿವೇಕಾನಂದ ಆಶ್ರಮ, ಸಿಂಧನೂರು ವತಿಯಿಂದ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು, ಸಿಂಧನೂರು ಆವರಣದಲ್ಲಿ “ವಿವೇಕ ಸಪ್ತಾಹ”ದ ಅಂಗವಾಗಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್‌ನ ರಾಜ್ಯ ಪ್ರಕಲ್ಪ ಪ್ರಮುಖರಾದ ಖ್ಯಾತ ಉಪನ್ಯಾಸಕ ಶ್ರೀ ಕಿರಣ್ ರಾಮ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, “ಆಧ್ಯಾತ್ಮಿಕ ಭಾರತದ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದರ ಸಂದೇಶ” ಎಂಬ ವಿಷಯದ ಕುರಿತು ವಿಶೇಷ ಹಾಗೂ ಪ್ರೇರಣಾದಾಯಕ ಉಪನ್ಯಾಸ ನೀಡಿದರು.
ಉಪನ್ಯಾಸದಲ್ಲಿ ಶ್ರೀ ಕಿರಣ್ ರಾಮ್ ಅವರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಅವರ ಆತ್ಮವಿಶ್ವಾಸ, ತ್ಯಾಗ, ಸೇವಾಭಾವ, ರಾಷ್ಟ್ರಭಕ್ತಿ ಮತ್ತು ಯುವಶಕ್ತಿಗೆ ನೀಡಿದ ಸಂದೇಶಗಳನ್ನು ಸವಿಸ್ತಾರವಾಗಿ ವಿವರಿಸಿದರು. “ಎದ್ದು ನಿಲ್ಲಿ, ಗುರಿ ತಲುಪುವವರೆಗೂ ನಿಲ್ಲಬೇಡಿ” ಎಂಬ ವಿವೇಕಾನಂದರ ಸಂದೇಶವು ಇಂದಿನ ಯುವಜನತೆಗೆ ದಾರಿ ತೋರಿಸುವ ದೀಪವಾಗಿದೆ ಎಂದು ಅವರು ಹೇಳಿದರು.
ಇಂದಿನ ಕಾಲಘಟ್ಟದಲ್ಲಿ ಶಿಕ್ಷಣವು ಕೇವಲ ಪದವಿ ಮತ್ತು ಉದ್ಯೋಗಕ್ಕೆ ಸೀಮಿತವಾಗದೆ, ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗಬೇಕು. ಶಿಸ್ತು, ಆತ್ಮನಿಯಂತ್ರಣ, ಮೌಲ್ಯಾಧಾರಿತ ಜೀವನ ಹಾಗೂ ಸಮಾಜಸೇವೆಯ ಮನೋಭಾವ ಬೆಳೆಸಿದಾಗ ಮಾತ್ರ ಸ್ವಾಮಿ ವಿವೇಕಾನಂದರು ಕನಸುಗೊಂಡ ಆಧ್ಯಾತ್ಮಿಕ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಯುವಜನತೆ ನಕಾರಾತ್ಮಕ ಚಿಂತನೆಗಳಿಂದ ದೂರವಿದ್ದು, ತಮ್ಮೊಳಗಿನ ಶಕ್ತಿಯನ್ನು ಅರಿತು ರಾಷ್ಟ್ರ ನಿರ್ಮಾಣದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ವ್ಯಕ್ತಿತ್ವ ವಿಕಸನಕ್ಕೆ ಆತ್ಮವಿಶ್ವಾಸವೇ ಮೂಲಭೂತ ಶಕ್ತಿ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ವಹಿಸಿದ್ದು, ರಾಮಕೃಷ್ಣ ವಿವೇಕಾನಂದ ಆಶ್ರಮದ ಪದಾಧಿಕಾರಿಗಳು ಸ್ವಾಮಿ ವಿವೇಕಾನಂದರ ತತ್ವಚಿಂತನೆಗಳನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ “ವಿವೇಕ ಸಪ್ತಾಹ”ದಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ ರೈಸ್ ಕಾಲೇಜಿನ ಕಾರ್ಯದರ್ಶಿ ಇರ್ಷಾದ್ ಕೆ , ಸನ್ ರೈಸ್ ಕಾಲೇಜಿನ ಪ್ರಾಂಶುಪಾಲರು ಚರ್ಕ್ರವರ್ತಿ ಡಿ , ಉಪನ್ಯಾಸಕರಾದ ವೀರೇಶ್, ಜ್ಞಾನೇಶ್ವರಿ , ವೀರೇಶ್ವರಿ , ಸಿಬ್ಬಂದಿ ವರ್ಗ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನ್ಯಾಸದ ಬಳಿಕ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಸಂಶಯಗಳಿಗೆ ಉತ್ತರಗಳನ್ನು ಪಡೆದುಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು. ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಮುಕ್ತಾಯಗೊಳಿಸಲಾಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಆಳವಾಗಿ ಮೂಡಿಸುವಲ್ಲಿ ಯಶಸ್ವಿಯಾಯಿತು.

Leave a Reply

Your email address will not be published. Required fields are marked *