ರಾಯಚೂರು ಜನವರಿ 08 (ಕರ್ನಾಟಕ ವಾರ್ತೆ): ರಾಷ್ಟ್ರೀಯ ಯುವ ದಿನದ ಅಂಗವಾಗಿ ಹಾಗೂ ರಾಯಚೂರು ಉತ್ಸವದ ಮಾಹಿತಿ ಜನರಿಗೆ ತಲುಪಿಸುವ ಸಲುವಾಗಿ ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯಿಂದ ನಮ್ಮ ಸಂಕಲ್ಪ-ಸುಂದರ, ಹಸಿರು ನಗರ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛ ನಗರಕ್ಕಾಗಿ ಓಟ ಎಂಬ ಮ್ಯಾರಥಾನ್ ಕಾರ್ಯಕ್ರಮವನ್ನು ಜನವರಿ 12ರಂದು ಆಯೋಜಿಸಲಾಗಿದೆ.
ನಗರ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡ ಮ್ಯಾರಾಥಾನ್ ಓಟವು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಬಸವೇಶ್ವರ ವೃತ್ತ, ಜಿಲ್ಲಾಧಿಕಾರಿಗಳ ನಿವಾಸ, ಮಂತ್ರಾಲಯ ಕೆಫೆ, ಕೃಷಿ ವಿಶ್ವವಿದ್ಯಾಲಯ ಗೇಟ್-2ರ ಮಾರ್ಗವಾಗಿ ಸಂಚರಿಸಿ ಮತ್ತೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸಮಾರೋಪಗೊಳ್ಳಲಿದೆ.
ಮ್ಯಾರಥಾನ್ ಓಟದ ಮೂಲಕ ಸ್ವಚ್ಛತೆಯಲ್ಲಿ ನಾಗರಿಕರ ಪಾತ್ರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯತೆ, ಪರಿಸರ ಕಾಳಜಿ, ನಗರ ಸೌಂದರ್ಯ ಹೆಚ್ಚಿಸುವುದು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಕುರಿತು ಜನಜಾಗೃತಿ ಮೂಡಿಸಲಾಗುತ್ತದೆ. ಹಾಗೂ ಪಾಲ್ಗೊಂಡ ಅಭ್ಯರ್ಥಿಗಳಿಗೆ ಇ-ಸರ್ಟಿಫಿಕೇಟ್, ಪ್ರಥಮ ರೂ.5000, ದ್ವಿತೀಯ ರೂ.3500 ಮತ್ತು ತೃತೀಯ ರೂ.2500 ಬಹುಮಾನ ನೀಡಲಾಗುವುದು.
ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕ್ರೀಡಾಪಟುಗಳು ಸೇರಿದಂತೆ ಇಡೀ ನಗರದ ಜನತೆ ಈ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮ್ಯಾರಥಾನ್‌ನಲ್ಲಿ ಭಾಗವಹಿಸಲು ಕ್ಯೂ.ಆರ್.ಕೋಡ್ ಸ್ಕ್ಯಾನ್ ಅಥವಾ ವೆಬ್‌ಸೈಟ್ ವಿಳಾಸ: https://forms.gle/oj58WfBkhCDCJAs17 ನಲ್ಲಿ ಮಾಡಿ ಇಂದೇ ನೋಂದಣಿ ಮಾಡಿಕೊಳ್ಳಬಹುದಾಗಿದೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *