ರಾಯಚೂರು ಜನವರಿ 08 (ಕರ್ನಾಟಕ ವಾರ್ತೆ): ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗವಾಡಿ ಕೇಂದ್ರದ ಫಲಾನುಭವಿಗಳಿಗೆ ಒದಗಿಸುವ ಇಲಾಖಾ ಸೇವಾ ಸೌಲಭ್ಯಗಳಲ್ಲಿ ಅರ್ಹ ಫಲಾನುಭವಿಗಳಾದ ಗರ್ಭಿಣಿ, ಬಾಣಂತಿ, 03 ವರ್ಷದೊಳಗಿನ ಮಕ್ಕಳಿಗೆ ಹಾಗೂ ಕಿಶೋರಿಯರಿಗೆ ಫೇಸ್ ರಿಕಾಗ್ನೈಜೇಷನ್ ಸಿಸ್ಟೆಂ ಮೂಲಕ ಪೂರಕ ಪೌಷ್ಠಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಭಾರತ ಸರಕಾರವು ಪೋಷಣ್ ಟ್ರೈಯಾಂಕರ್ ಎನ್ನುವ ತಂತ್ರಾಂಶ ಜಾರಿ ತಂದಿದ್ದು ಅರ್ಹ ಫಲಾನುಭವಿಗಳಿಗಷ್ಟೆ ಸೌಲಭ್ಯ ದೊರೆಯುವಂತೆ, ಬೇರೆ ಯಾವುದೇ ರೀತಿಯಲ್ಲಿ ಅವ್ಯವಹಾರವಾಗದಂತೆ ನೋಡಿಕೊಳ್ಳಲು ಓಟಿಪಿಯ ಮುಖಾಂತರವೇ ಸೇವೆಯನ್ನು ಒದಗಿಸಲಾಗುತ್ತಿದೆ. ನಕಲಿ ಫಲಾನುಭವಿಗಳ ತಡೆಗೆ ಫೇಸ್ ರಿಕಾಗ್ನೈಜೇಷನ್ ಸಿಸ್ಟೆಂ ಸಹಕಾರಿಯಾಗಿದೆ.
ಒಬ್ಬ ಅರ್ಹ ಫಲಾನುಭವಿ ಪೂರಕ ಪೌಷ್ಠಿಕ ಆಹಾರ ಪಡೆಯಬೇಕಾದಲ್ಲಿ ಮೊದಲಿಗೆ “ಆಧಾರ್ ನೋಂದಣಿ ಮಾಡಿಸಬೇಕು. ನಂತರ ಆಧಾರ್ ವೆರಿಫೀಕೆಶನ್ ಆಗುತ್ತದೆ. ಇದಾದನಂತರ ಈ ಫೇಸ್ ರಿಕಾಗ್ನೈಜೇಷನ್ ಸಿಸ್ಟೆಂ ಮಾಡಲಾಗುತ್ತದೆ. ನಂತರ ಫಲಾನುಭವಿಯ ಫೇಸ್ ಮ್ಯಾಚ್ ಆಗಬೇಕು. ಈ ಎಲ್ಲಾ ಹಂತಗಳನ್ನು ಪೂರೈಸಿದ ನಂತರವೇ ಅರ್ಹ ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲಾಗುವುದು. ಪ್ರತಿ ತಿಂಗಳು 06 ತಿಂಗಳಿಂದ 03 ವರ್ಷದ ಫಲಾನುಭವಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆಯನ್ನು ಬಾಲವಿಕಾಸ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಅಂಗನವಾಡಿ ಕೇಂದ್ರದ ಪೋಟೋ ಕ್ಯಾಪ್ಚರ್‌ನ್ನು ಸಹ ಮಾಡಲಾಗುತ್ತಿದೆ. ಹೀಗಾಗಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೀ ಯೋಜನೆಯನ್ನು ಕರ್ನಾಟಕದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ ಹಾಗೂ ಪಾರದರ್ಶಕತೆ ತರಲು ಇದು ಸಹಕಾರಿಯಾಗಿದೆ. ಗರ್ಭಿಣಿ, ಬಾಣಂತಿ ಮತ್ತು 06 ವರ್ಷದೊಳಗಿನ ಮಕ್ಕಳ, ಪೌಷ್ಠಿಕ ಆಹಾರ, ಚುಚ್ಚುಮದ್ದು ಮತ್ತು ಆರೋಗ್ಯದ ಕುರಿತು ಪರಿಶೀಲಿಸಲು ಮನೆ ಭೇಟಿ ದಿನಾಂಕಗಳು ಆನ್‌ಲೈನ್‌ನಲ್ಲಿ ತೋರಿಸುತ್ತದೆ. ಈ ದಿನಾಂಕದಂದು ಫಲಾನುಭವಿಗಳನ್ನು ಮನೆ ಭೇಟಿ ಮಾಡಿ ಅಗತ್ಯ ಮಾಹಿತಿ ಮತ್ತು ಸೇವೆಯನ್ನು ಒದಗಿಸುವಲ್ಲಿ ಹೋಮ್ ವಿಜಿಟ್ವ್ ತುಂಬ ಅನುಕೂಲಕರವಾಗಿದೆ ಎಂದು ರಾಯಚೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
