ಕವಿತಾಳ : ಪಟ್ಟಣದ ಪಂಚಾಯಿತಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನಿರ್ದೇಶನದಂತೆ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಕಲಚೇತನರ ಸಮನ್ವಯ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ಜಶ್ಪಾಲ್ ಸಿಂಗ್ ಅವರು, ಪಟ್ಟಣ ಪಂಚಾಯತಿಯ ಶೇ.5 ರ ಅನುದಾನವನ್ನು ವಿಕಲಚೇತನರ ಬೇಡಿಕೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಸಮರ್ಪಕವಾಗಿ ಬಳಸಲಾಗುವುದು ಎಂದು ತಿಳಿಸಿದರು. ಇದುವರೆಗೆ ಬಾಕಿ ಉಳಿದಿರುವ ಹಿಂದಿನ ವರ್ಷಗಳ ಅನುದಾನವನ್ನೂ ಕ್ರಮಬದ್ಧವಾಗಿ ಬಳಸಿಕೊಂಡು ವಿಕಲಚೇತನರಿಗೆ ಸೌಲಭ್ಯ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ ವಸೂಲಿಗಾರರಾದ ರಾಘವೇಂದ್ರ, ಸಂಕಲ್ಪ ವಿಕಲಚೇತನರ ಒಕ್ಕೂಟದ ಗೌರವಾಧ್ಯಕ್ಷರಾದ ದೇಸಾಯಿ ದೊತರಬಂಡಿ, ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಚಲ್ಮಲ್, ಜಿಲ್ಲಾ ಉಪಾಧ್ಯಕ್ಷರಾದ ಸಾವಿತ್ರಮ್ಮ, ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶೇಖರಪ್ಪ ಮುರ್ಕಿಗುಡ್ಡ, ನಗರ ಪುನರ್ವಸತಿ ಕಾರ್ಯಕರ್ತರಾದ ಹಿರಲಾಲ್ ಸಿಂಗ್, ವಿಕಲಚೇತನ ಕಾರ್ಯಕರ್ತರಾದ ನಂದಕುಮಾರ್, ಅಯ್ಯಾಳಿ, ಮಲ್ಲಿಕಾರ್ಜುನ ಸೇರಿದಂತೆ ಅನೇಕ ವಿಕಲಚೇತನ ಬಂಧುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
ಸಮನ್ವಯ ಸಭೆಯಲ್ಲಿ ವಿಕಲಚೇತನರ ಹಕ್ಕುಗಳು, ಸರ್ಕಾರಿ ಸೌಲಭ್ಯಗಳ ಸಮರ್ಪಕ ಅನುಷ್ಠಾನ, ಪುನರ್ವಸತಿ ಹಾಗೂ ಗೌರವಪೂರ್ಣ ಬದುಕಿನ ಅಗತ್ಯತೆ ಕುರಿತು ಚರ್ಚೆ ನಡೆಯಿತು.

