ಹಟ್ಟಿ (ಕೊಪ್ಪಳ) : ಡಿ 28 ದಕ್ಷಿಣ ಭಾರತದ ಕುಂಭಮೇಳ ಎನಿಸಿರುವ ಇಲ್ಲಿನ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವ ನಡೆಯಲು ಇನ್ನು ಎಂಟು ದಿನಗಳ ಕಾಲ ಸಮಯವಿದೆ. ಅದಕ್ಕೂ ಮೊದಲು ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿ ಭಕ್ತರು ಸಂಭ್ರಮದಿಂದ ‘ಜೋಳದ ರೊಟ್ಟಿ’ಯ ತೇರು ಎಳೆದಿದ್ದಾರೆ.
ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮೂರು ವರ್ಷಗಳ ಬಳಿಕ ಹಟ್ಟಿ ಗ್ರಾಮಕ್ಕೆ ಶುಕ್ರವಾರ ರಾತ್ರಿ ಕಾಲಿಡುತ್ತಿದ್ದಂತೆಯೇ ಅಲ್ಲಿ ಸಂಭ್ರಮ ಮನೆ ಮಾಡಿತ್ತು.
ಸ್ವಾಮೀಜಿ ಗ್ರಾಮಕ್ಕೆ ಬಂದು ಮರಳಿ ವಾಪಸ್‌ ಹೋಗುವ ತನಕ ಜೈಕಾರಗಳು, ಘೋಷಣೆಗಳು ಮೊಳಗಿದವು. ಆದರೆ ಸ್ವಾಮೀಜಿ ಮಾತನಾಡುವಾಗ ಮಾತ್ರ ಗಾಢ ಮೌನ ಆವರಿಸಿತ್ತು. ಗ್ರಾಮದ ಜನ ಶ್ರದ್ಧೆಯಿಂದ ಅವರು ಮಾತುಗಳನ್ನು ಆಲಿಸಿ ಚಪ್ಪಾಳೆ ಹೊಡೆಯುತ್ತಿದ್ದರು.

ಗ್ರಾಮದ ದೇವಸ್ಥಾನದ ಆವರಣಕ್ಕೆ ಸ್ವಾಮೀಜಿ ಭೇಟಿ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ‘ಹಟ್ಟಿಯಲ್ಲಿ ರೊಟ್ಟಿ ಸಪ್ಪಳವಾದ ಬಳಿಕ ಎಲ್ಲ ಕಡೆಯೂ ರೊಟ್ಟಿ ಸದ್ದಾಗುತ್ತಿದೆ. ಜನ ಜಾಸ್ತಿ ರೊಟ್ಟಿ ಮಾಡಿಕೊಡುತ್ತಿದ್ದಾರೆ. ನಿಮ್ಮೆಲ್ಲರ ಈ ಕೆಲಸ ಮತ್ತಷ್ಟು ಜನರಿಗೆ ಪ್ರೇರಣೆಯಾಗುತ್ತಿದೆ. ಯುವಕರು, ತಾಯಂದಿರು ನಿಮ್ಮೆಲ್ಲರ ಪ್ರೀತಿ ದೊಡ್ಡದು. ಗವಿಮಠದ ಜಾತ್ರೆ ತೇರು ಎಳೆಯಲು ಇನ್ನೊಂದು ವಾರವಿದ್ದು, ಅದಕ್ಕೂ ಮೊದಲು ಇಲ್ಲಿ ರೊಟ್ಟಿ ಹಬ್ಬದ ಸಂಭ್ರಮದ ಮೂಲಕ ನೀವೆಲ್ಲರೂ ಸಂತಸದ ತೇರು ಎಳೆದಿದ್ದೀರಿ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಭಕ್ತರು ಏನು ಕೊಡುತ್ತಾರೆ ಎನ್ನುವುದು ಮುಖ್ಯವಲ್ಲ’ ಎಂದ ಸ್ವಾಮೀಜಿ ಒಬ್ಬ ಭಕ್ತರು ಬಂದು ನಾನು ಕೊತ್ತಂಬರಿ ಸೊಪ್ಪು ಮಾತ್ರ ಕೊಡುತ್ತೇನೆ. ಅದನ್ನು ಎಲ್ಲ ಭಕ್ತರಿಗೆ ಮುಟ್ಟಿಸಬೇಕು’ ಎನ್ನುತ್ತಾರೆ. ಅದನ್ನು ಪಡೆದುಕೊಂಡು ಅದೆ ಕೊತ್ತಂಬರಿಯನ್ನು ಸಾರಿಗೆ ಹಾಕಿ ಲಕ್ಷಾಂತರ ಭಕ್ತರಿಗೆ ಉಣಬಡಿಸಿದೆ. ಹೀಗಾಗಿ ಭಕ್ತರು ಕೊಡುವ ಪ್ರೀತಿ ದೊಡ್ಡದು’ ಎಂದು ಮಾರ್ಮಿಕವಾಗಿ ಹೇಳಿದರು.

ಚುರುಕು ಪಡೆದ ಸಿದ್ಧತೆ: ಜನವರಿ 1ರಿಂದ ಜಾತ್ರೆಯ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಿದ್ಧತಾ ಕಾರ್ಯಗಳೂ ಚುರುಕು ಪಡೆದುಕೊಂಡಿವೆ. ಮಹಾದಾಸೋಹದ ಮನೆ ನಿರ್ಮಾಣ, ಆಟೋಟಗಳ ತಾಣ, ತೇರು ಸಾಗುವ ಮಾರ್ಗ ಹೀಗೆ ವಿವಿಧೆಡೆ ಸಿದ್ಧತೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *