ರಾಯಚೂರು ಡಿಸೆಂಬರ್ 24 (ಕರ್ನಾಟಕ ವಾರ್ತೆ): ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಕೆ.ವಿ.ಸುರೇಂದ್ರ ಕುಮಾರ್ ಅವರು ಹೇಳಿದರು.
ಡಿಸೆಂಬರ್ 24ರ ಬುಧವಾರ ದಂದು ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಯುವುದು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಖರೀದಿದಾರನ ಯೋಗಕ್ಷೇಮದ ದೃಷ್ಟಿಯಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಅರಿಯುವುದು ಅವಶ್ಯಕತೆಯಿದೆ. ಗ್ರಾಹಕರ ರಕ್ಷಣೆ ಸಮಾಜದ ಧ್ವನಿಯಾದಾಗ ಮಾತ್ರ ಗ್ರಾಹಕರ ಸಂರಕ್ಷಣೆ ಸಾಧ್ಯ ಎಂದರು.
ಉತ್ಪನ್ನಗಳನ್ನು ಖರೀದಿಸುವಾಗ ಹೆಚ್ಚಿನ ಲಾಭದ ಸಲುವಾಗಿ ಕೆಲ ಮಾರಾಟಗಾರರು ಹೆಚ್ಚಿನ ಶುಲ್ಕವನ್ನು ವಿಧಿಸಿ ಗ್ರಾಹಕರಿಗೆ ವಂಚಿಸುತ್ತಾರೆ. ಮಾರಾಟಗಾರರಿಂದ ಆಗುವ ವಂಚನೆಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಎಂಬುದು ಸೇರಿದಂತೆ ಬೇರೆ ಬೇರೆ ವಿಷಯ ತಿಳಿಯುವುದು ಸೇರಿದಂತೆ ಜನಜಾಗೃತಿಗಾಗಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ ಎಂದರು.
ರಾಯಚೂರಿನಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಿಂದ ಒಂದು ವರ್ಷದೊಳಗೆ ಸುಮಾರು 10 ಕೋಟಿ ರೂ.ಗಳಿಗೂ ಹೆಚ್ಚು ದಂಡವನ್ನು ವಿಧಿಸಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗವು ಹಿಂದುಳಿದ ಪ್ರದೇಶವಾಗಿದೆ. ಇಲ್ಲಿನ ಎಲ್ಲ ಜನರು ಸರಿಯಾಗಿ ಕಾನೂನು ತಿಳಿದುಕೊಂಡು ಈ ಭಾಗವನ್ನು ಅಭಿವೃದ್ಧಿ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕೆಂದು ಹೇಳಿದರು.
ಈ ವೇಳೆ ಗೌರವನ್ವಿತ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್ ಅವರು ಮಾತನಾಡಿ, ಪ್ರತಿವರ್ಷ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ ಆಚರಿಸಲಾಗುತ್ತದೆ. ಗ್ರಾಹಕರಿಗೆ ಸಂಬಂಧಿಸಿದ ಕಾಯಿದೆ ಕಾನೂನು ಸೇರಿದಂತೆ ಬೇರೆ ಬೇರೆ ಅಂಶಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಬೇಕು. ಗ್ರಾಹಕರು ಯಾವುದೇ ವಸ್ತು, ಸರಕುಗಳನ್ನು ಖರೀದಿಸುವ ಸಂದರ್ಭದಲ್ಲಿ ಆ ವಸ್ತುವಿನ ಗುಣಮಟ್ಟ, ಅವಧಿ ಮುಂತಾಗಿ ಪರಿಶೀಲಿಸಿ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು. ಅಲ್ಲದೆ ಖರೀದಿಸಿದ ವಸ್ತುವಿನ ಗುಣಮಟ್ಟ ಕಳಪೆ ಮತ್ತು ದೋಷಪೂರಿತವಾಗಿದ್ದಲ್ಲಿ ಗ್ರಾಹಕರು ರಶೀದಿಯೊಂದಿಗೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರೆ ಗ್ರಾಹಕರಿಗೆ ಕಾನೂನಿನಡಿ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಉಪನ್ಯಾಸಕರಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಪ್ರಭುದೇವ್ ಅವರು ಮಾತನಾಡಿ, 1986ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯನ್ನು ಅಂಗೀಕರಿಸಲಾಯಿತು. ಈ ಕಾಯ್ದೆಗೆ ಡಿಸೆಂಬರ್ 24ರಂದು ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿತು. ಉತ್ಪಾದಕರು ಅಥವಾ ಮಾರಾಟಗಾರರಿಂದಾಗುವ ಮೋಸ, ವಂಚನೆ, ಶೋಷಣೆಗಳಿಂದ ಗ್ರಾಹಕರಿಗೆ ರಕ್ಷಣೆ ಒದಗಿಸುವ ಉದ್ದೇಶದಿಂದ ಈ ಕಾಯಿದೆ ಜಾರಿಗೆ ಬಂದಿದೆ. ಅಂದಿನಿಂದ ಈ ದಿನದ ನೆನಪಿನಲ್ಲಿ ಪ್ರತಿವರ್ಷ ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಹಕರ ಹಕ್ಕುಗಳ ಬಗ್ಗೆ ಹಾಗೂ ಅವರ ಜವಾಬ್ದಾರಿಗಳ ಬಗ್ಗೆ ಜಾಗೃತಿ ಮೂಡಿಸುವುದು. ಮಾರಾಟಗಾರರಿಂದ ಗ್ರಾಹಕರಿಗೆ ಆಗುವ ವಂಚನೆಗಳಿಂದ ರಕ್ಷಿಸುವ ಸಲುವಾಗಿ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವು ಮಹತ್ವದ್ದಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಜಾಗೃತಿ: ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025ರ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಆಹಾರ ನಾಗರಿಕ ಮತ್ತು ಸರಬರಾಜು ನಿಗಮ ನಿಯಮಿತದಿಂದ ಸಾರ್ವಜನಿಕ ವಿತರಣೆಯಡಿ ವಿತರಿಸಲಾದ ಸಾರವರ್ಧಿತ ಅಕ್ಕಿಯ ಕುರಿತು, ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ತೂಕ ಮತ್ತು ಅಳತೆ ಹಾಗೂ ಮೆ: ಸುಮಂತ್ ಫ್ಲಾಮೋಜನ್ ಇಂಡೇನ್ ಗ್ಯಾಸ್ ಏಜೆನ್ಸಿಯಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯ ಎಲ್.ಪಿ.ಜಿ ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ನಜೀರ್ ಅಹಮದ್, ಜಿಲ್ಲಾ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ನಜೀರ್, ವಕೀಲರಾದ ಗೌರೀಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಕೃಷ್ಣ ಶಾವಂತಗೇರಿ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಅಮೃತಾ ಪಿ.ಚವ್ಹಾಣ, ಕರ್ನಾಟಕ ಆಹಾರ ನಾಗರಿಕ ಮತ್ತು ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರಾದ ಪ್ರಕಾಶ್, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ವ್ಯವಸ್ಥಾಪಕರಾದ ಹರೀಶ್, ಪ್ರಥಮ ದರ್ಜೆ ಸಹಾಯಕರಾದ ಜಿ.ಶ್ರೀಹರಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *