ರಾಯಚೂರು ಡಿಸೆಂಬರ್ 23 (ಕರ್ನಾಟಕ ವಾರ್ತೆ): ಕೇಂದ್ರ ಸಂವಹನ ಇಲಾಖೆ ಬಳ್ಳಾರಿ, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ದೇವದುರ್ಗ ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ದೇವದುರ್ಗ ತಾಲೂಕಾಡಳಿತ, ತಾಲ್ಲೂಕು ಪಂಚಾಯತ್, ಆರೋಗ್ಯ ಇಲಾಖೆ, ಪುರಸಭೆ ಇವರ ಆಶ್ರಯದಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ವಿಕಸಿತ ಭಾರತ-2047 ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಕುರಿತು ಛಾಯಚಿತ್ರ ಪ್ರದರ್ಶನ ಕಾರ್ಯಕ್ರಮವು ಡಿಸೆಂಬರ್ 23ರಂದು ನಡೆಯಿತು.
ದೇವದುರ್ಗ ಪಟ್ಟಣದ ಖೇಣೇದ ಫಂಕ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ದೇವದುರ್ಗದ ಉಪ ತಹಸೀಲ್ದಾರ ಭೀಮರಾಮ್ ಮೇಟಿ ಅವರು ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ವಂದೇ ಮಾತರಂ ಗೀತೆಯು ಮಹತ್ವದ ಕೊಡುಗೆ ನೀಡಿ, ರಾಷ್ಟ್ರದ ಏಕತೆ ಸಾಧಿಸಲು ಅವಕಾಶ ನೀಡಿತು ಎಂದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿಗಳಾದ ಬಸವರಾಜ್ ಹಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸಂವಿಧಾನ ಮತ್ತು ಭಾರತೀಯರ ಒಗ್ಗಟ್ಟು ವಸಹತುಶಾಹಿ, ಪಟ್ಟಭದ್ರ ಆಡಳಿಕ್ಕೆ ಅವಕಾಶ ನೀಡದೆ, ನಾವೆಲ್ಲರೂ ಒಂದೇ ಎನ್ನುವ ಭಾವನೆಯನ್ನು ವಂದೇ ಮಾತರಂ ಮೂಡಿಸುತ್ತಿದೆ ಮತ್ತು ಏಕತೆಯನ್ನು ಸಾಧಿಸಲು ಅನುಕೂಲವಾಗಿದೆ ಎಂದು ತಿಳಿಸಿದರು.
ಈ ವೇಳೆ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಕೆ.ಎಮ್. ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಸಿದ್ದಯ್ಯ ಸ್ವಾಮಿ ಅವರು ಮಾತನಾಡಿ, ವಂದೇ ಮಾತರಂ ಗೀತೆಯ ಅರ್ಥ ಮತ್ತು ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ವಹಿಸಿದ ಮಹತ್ವದ ಪಾತ್ರದ ಕುರಿತು ವಿವರಿಸಿದರು.
ಇದಕ್ಕೂ ಮುಂಚೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆ ಪ್ರಸುತಪಡಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೆ
ಹಿಂದಿನ ದಿನ ಅಯೋಜಿಸಲಾಗಿದ್ದ ವಿಶೇಷ ರಂಗೋಲಿ ಸ್ಪರ್ಧೆ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳಾದ ಹಂಪಯ್ಯ, ದೇವದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಸುಭಾಷ್ ಚಂದ್ರ ಪಾಟೀಲ್, ಜ್ಞಾನ ಜ್ಯೋತಿ ಕಾಲೇಜಿನ ಪ್ರಾಂಶುಪಾಲರಾದ ಅಮೀರ್, ದೇವದುರ್ಗ ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ನರಸಿಂಗರಾವ್, ಕಾರ್ಯದರ್ಶಿಗಳಾದ ಬಂದೇ ನವಾಜ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸಹಾಯಕರಾದ ಗಂಗಮ್ಮ ಇದ್ದರು. ಬಿ.ಲಕ್ಷ್ಮಣ ಅವರು ಸ್ವಾಗತಿಸಿದರು. ರಾಜಶೇಖರ್ ಅವರು ನಿರೂಪಿಸಿ, ವಂದಿಸಿದರು.


