ಮಸ್ಕಿ : ನಿಸರ್ಗದತ್ತವಾಗಿ ನಿರ್ಮಿತವಾಗಿರುವ ಬೆಟ್ಟಗಳ ಸಾಲು,ಎಲ್ಲಿ ನೋಡಿದರೂ ಹಚ್ಚ ಹಸಿರು,ಈ ಹಚ್ಚ ಹಸಿರಿನ ಬೆಟ್ಟಗಳ ನಡುವೆ ಗರಿ ಬಿಚ್ಚಿ ಸ್ವಚ್ಛಂದವಾಗಿ ನಾಟ್ಯ ಮಾಡುವ ನಾಟ್ಯ ಮಯೂರಿ ಇದು ಕಂಡುಬರುವುದು ಮಸ್ಕಿಯ ಮಲ್ಲಿಕಾರ್ಜುನ ಬೆಟ್ಟದ ತಪ್ಪಲಿನಲ್ಲಿ.
ಹೌದು ಮಸ್ಕಿ ಪಟ್ಟಣದ ಎರಡನೇ ಶ್ರೀಶೈಲ ಎಂದೇ ಖ್ಯಾತಿ ಪಡೆದ ಐತಿಹಾಸಿಕ ಶ್ರೀ ಬೆಟ್ಟದ ಮಲ್ಲಿಕಾರ್ಜುನ ದೇವಾಲಯದ ಬೆಟ್ಟಗಳ ಸಾಲಿನಲ್ಲಿ ನವಿಲು ನರ್ತನ ಮಾಡುತ್ತಿರುವ ದೃಶ್ಯ ಮನಮೋಹಕವಾಗಿ ಕಾಣಸಿಗುತ್ತವೆ.ಈ ಬೆಟ್ಟಗಳ ಸಾಲು ಹಲವಾರು ಜಾತಿಯ ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿ ಮಾರ್ಪಡುತ್ತಿದೆ.ಇಲ್ಲಿ ಸಹಸ್ರಾರು ನವಿಲುಗಳ ಜೊತೆಗೆ ಮೊಲ,ನರಿ,ಕಾಡುಹಂದಿ,ಉಡುವ,ಮೆಚ್ಚಿನ ಹಾವು,ಬುರಲಿ,ಕೌಜುಗ ಸೇರಿದಂತೆ ಇನ್ನೂ ಅನೇಕ ಬಗೆಯ ಪ್ರಾಣಿ-ಪಕ್ಷಿಗಳು ಈ ಪ್ರದೇಶದಲ್ಲಿ ವಾಸಿಸುತ್ತಿವೆ.
ಪಟ್ಟಣದ ದುರ್ಗದ ಗುಡ್ಡ,ಅಶೋಕ ಶಿಲಾ ಶಾಸನ ಹಿಂದೆ ಇರುವ ಬೆಟ್ಟದ ಪ್ರದೇಶದಲ್ಲಿ ದಟ್ಟವಾಗಿ ಬೆಳೆದಿರುವ ಜಾಲಿ ಗಿಡಗಳ ಪೊದೆಗಳು ನವಿಲುಗಳ ಆಶ್ರಯ ತಾಣವಾಗಿದ್ದು,ನವಿಲುಗಳ ಸಂತತಿ ಹೆಚ್ಚಾಗಲು ಕಾರಣವಾಗಿದೆ.ನವಿಲುಗಳು ಗುಂಪು ಗುಂಪಾಗಿ ರಸ್ತೆ ಬದಿ ಓಡಾಡುವುದನ್ನು ಕಂಡಾಗ ಸಾರ್ವಜನಿಕರ ಮನಸಲ್ಲಿ ಸಂಚಲನ ಮೂಡಿಸದೆ ಇರಲಾರದು.
ನವಿಲುಗಳಿಗೆ ಮೊಟ್ಟೆಗಳನ್ನು ಇಡಲು ಪೊದೆಗಳಿರಬೇಕು,ಮಸ್ಕಿಯ ಬೆಟ್ಟಗಳ ಸಾಲು ಇದಕ್ಕೆ ಪೂರಕವಾಗಿದ್ದು,ನವಿಲುಗಳ ಸಂತಾನಾಭಿವೃದ್ಧಿಗೆ ಅನುಕೂಲಕರವಾಗಿದೆ.
ಇನ್ನೂ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಆಹಾರ ಹರಸಿ ಪೊದೆಯಿಂದ ಹೊರಗೆ ಬರುವ ನವಿಲುಗಳ ಹಿಂಡನ್ನು ನೋಡಲು ಇಲ್ಲಿನ ಜನ ಕಾತುರದಿಂದ ಕಾಯುತ್ತಾರೆ.ಕೆಲ ಪ್ರದೇಶಗಳಲ್ಲಿ ಏಳೆಂಟು ನವಿಲುಗಳು ತಮ್ಮ ಮರಿಗಳೊಂದಿಗೆ ನಸುಕಿನಲ್ಲಿ ಹೊರಬಂದು ಗರಿಬಿಚ್ಚಿ ನರ್ತಿಸುವುದು ನೋಡುಗರ ಮೈಮನ ಸೂರೆಗೊಳ್ಳುತ್ತದೆ.
ನವಿಲುಗಳನ್ನು ಕಂಡರೆ ಯಾರಿಗೆ ಇಷ್ಟ ಇಲ್ಲ ಹೇಳಿ,ಅದರಲ್ಲೂ ಈ ಭಾಗದ ಜನರಿಗೆ ನವಿಲು ಕಂಡರೆ ಎಲ್ಲಿಲ್ಲದ ಪ್ರೀತಿ.ದಾರಿಯುದ್ದಕ್ಕೂಸಾಗುವಾಗ ಬೆಟ್ಟದ ತಪ್ಪಲಿನಲ್ಲಿ ನವಿಲುಗಳು ಏನಾದರೂ ಕಂಡರೆ ಮನೆಗೆ ಹೋಗುವ ದಾರಿ ಮರೆತೇ ಹೋಗುತ್ತದೆ.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾದು ಹೋಗಿರುವ ಹಳ್ಳದ ಸುತ್ತಲಿನ ಪ್ರದೇಶದಲ್ಲಿಯೂ ಕೂಡಾ ನವಿಲುಗಳು ಹಿಂಡು ಹಿಂಡಾಗಿ ಸೇರುವ ದೃಶ್ಯ ಸರ್ವೇ ಸಾಮಾನ್ಯ.
ಐತಿಹಾಸಿಕವಾಗಿ,ಧಾರ್ಮಿಕವಾಗಿ ಪ್ರಖ್ಯಾತಿ ಪಡೆದಿರುವ ಮಸ್ಕಿ ಪಟ್ಟಣದಲ್ಲಿ ನವಿಲು ಧಾಮವೊಂದು ನಿರ್ಮಾಣ ಮಾಡಬೇಕೆಂಬುದು ಪ್ರಕೃತಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ದಿಗೆಮಠ (ಗ್ರೀನ್ ಆರ್ಮಿ) ರವರ ಹಾಗೂ ಪ್ರಾಣಿ ಪ್ರಿಯರು ಒತ್ತಾಸೆಯಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರ ಸಕಾಲಕ್ಕೆ ಎಚ್ಚೆತ್ತು ನವಿಲುಗಳ ರಕ್ಷಣೆಗೆ ಮುಂದಾಗಬೇಕಿದೆ.
ಹೇಳಿಕೆ .
ಮಸ್ಕಿ ಯಲ್ಲಿ ನವಿಲು ದಾಮ ಸ್ಥಾಪನೆ ಮಾಡಲಿಕ್ಕೆ
ಈ ವಿಷಯವನ್ನು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಸುಭಾಷ್ ಚಂದ್ರ ನಾಯ್ಕ್ ಕೈರವಾಡಗಿ
ಆರ್.ಓ.ಎಫ್.ಲಿಂಗಸಗೂರು.

