ಬಾಣಂತಿಯರ ಸರಣಿ ಸಾವು ಪ್ರಕರಣ, ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸಿ ಮಹಿಳಾ ಆಯೋಗಕ್ಕೆ ಮಂಜುನಾಥ ಗಾಣಗೇರ ಮನವಿ
ಸಿಂಧನೂರು, ಡಿಸೆಂಬರ್ 8
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ 2024ರ ಅಕ್ಟೋಬರ್ ತಿಂಗಳಿನಲ್ಲಿ ರಿಮ್ಸ್ಗೆ ಚಿಕಿತ್ಸೆಗೆ ದಾಖಲಾದ ನಾಲ್ವರು ಬಾಣಂತಿಯರ ಸರಣಿ ಸಾವಾಗಿದ್ದು, ಮೃತ ಮಹಿಳೆಯರ ಸಂತ್ರಸ್ತ ಕುಟುಂಬಗಳಿಗೆ ಇದುವರೆಗೂ ಸರ್ಕಾರದಿಂದ ಪರಿಹಾರ ದೊರಕಿರುವುದಿಲ್ಲ. ಈ ಕೂಡಲೇ ಆ ಕುಟುಂಬಗಳಿಗೆ ರೂ.25 ಲಕ್ಷ ಪರಿಹಾರ ಒದಗಿಸಬೇಕು ಹಾಗೂ ಅನಾಥರಾದ ನಾಲ್ಕು ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತುಕೊಳ್ಳುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಅವರಿಗೆ ಸೋಮವಾರ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆರಿಗಾಗಿ ದಾಖಲಾಗಿದ್ದ ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಮಹಿಳೆ ಮೌಸಂಬಿ ಮಂಡಲ್ ಗಂಡ ಮಹೇಶ್ವರ ಮಂಡಲ್ ಹೆರಿಗೆ ನಂತರ ದಿನಾಂಕ: 21-10-2024ರಂದು ಮೃತಪಟ್ಟಿರುತ್ತಾರೆ. 21-10-2024ರಂದು ಆಸ್ಪತ್ರೆಗೆ ದಾಖಲಾಗಿದ್ದ ರಾಗಲಪರ್ವಿ ಗ್ರಾಮದ ಚನ್ನಮ್ಮ ಗಂಡ ಬಸವರಾಜ ನಾಯಕ ಅವರೂ 8 ದಿನಗಳ ನಂತರ ರಿಮ್ಸ್ನಲ್ಲಿ ನವೆಂಬರ್ 2ರಂದು ಸಾವಿಗೀಡಾಗಿದ್ದಾರೆ. ದಿನಾಂಕ: 28-10-2024ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ, ಉದ್ಬಾಳ.ಜೆ ಗ್ರಾಮದ ಗರ್ಭಿಣಿ ಮಹಿಳೆ ಚಂದ್ರಕಲಾ ಹೆರಿಗೆ ನಂತರ ಅಸ್ವಸ್ಥಗೊಂಡು ರಾಯಚೂರಿನ ರಿಮ್ಸ್ನಲ್ಲಿ ಮೃತಪಟ್ಟಿದ್ದಾರೆ ಹಾಗೂ ದಿನಾಂಕ: 30-10-2024ರಂದು ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ರೇಣುಕಮ್ಮ ಗಂಡ ಬಸವರಾಜ ಹೆರಿಗೆ ನಂತರ ಅಸ್ವಸ್ಥಗೊಂಡು ರಾಯಚೂರಿನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಈ ನಾಲ್ಕು ಪ್ರಕರಣಗಳು ಸರಣಿಯಾಗಿ ಘಟಿಸಿವೆ. ನಾಲ್ವರು ಬಾಣಂತಿಯರು ಮೃತಪಟ್ಟು, ನವಜಾತ ಶಿಶುಗಳು ತಾಯಿಯನ್ನು ಕಳೆದುಕೊಂಡ ಅನಾಥವಾಗಿವೆ. ಇದರಿಂದ ಈ ಮಹಿಳೆಯರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಸಿಎಂ, ಆರೋಗ್ಯ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಬಂದಿಸಿದ ಇಲಾಖೆಯ ಪ್ರಮುಖ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ವರ್ಷ ಗತಿಸಿದರೂ ಇಲ್ಲಿಯವರೆಗೂ ಈ ಕುಟುಂಬಗಳಿಗೆ ಪರಿಹಾರ ನೀಡಿರುವುದಿಲ್ಲ.” ಎಂದು ಮನವಿಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ.
‘25 ಲಕ್ಷ ಪರಿಹಾರ ಕೊಡಿ’
“ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡು ಆರ್.ಎಚ್.ಕ್ಯಾಂಪ್ 3ರ ಮೌಸಂಬಿ ಮಂಡಲ್, ರಾಗಲಪರ್ವಿಯ ಚನ್ನಮ್ಮ, ಉದ್ಬಾಳ.ಜೆ ಗ್ರಾಮದ ಚಂದ್ರಕಲಾ ಹಾಗೂ ಅಂಕುಶದೊಡ್ಡಿಯ ರೇಣುಕಮ್ಮ ನಾಲ್ವರು ಬಾಣಂತಿಯರು ಮೃತಪಟ್ಟಿದ್ದು ಈ ನಾಲ್ವರು ಮಹಿಳೆಯರ ಕುಟುಂಬಗಳಿಗೆ 25 ಲಕ್ಷ ಪರಿಹಾರ ಒದಗಿಸಬೇಕು., ಮಹಿಳೆಯರು ಮೃತರಾಗಿದ್ದರಿಂದ ಅನಾಥವಾಗಿರುವ ನಾಲ್ಕು ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು, ಹೆರಿಗೆಯಾದ ನಂತರ ಬಾಣಂತಿಯರ ಸಾವಿನ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು, ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಇತ್ತೀಚೆಗೆ ಆರಂಭವಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿ ಕೊರತೆ ಇದ್ದು, ಕೂಡಲೇ ನೇಮಕ ಮಾಡಬೇಕು, ಕೆಲಸದ ಅವಧಿಯಲ್ಲಿ ಬೇರೆ ಕಡೆ ಖಾಸಗಿ ಕ್ಲಿನಿಕ್ ನಡೆಸುವ ವೈದ್ಯರ ಮೇಲೆ ಶಿಸ್ತುಕ್ರಮ ಜರುಗಿಸಬೇಕು” ಎಂಬ ಬೇಡಿಕೆಗಳುಳ್ಳ ಮನವಿಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಿರುವುದಾಗಿ ಮಂಜುನಾಥ ಗಾಣಗೇರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *