ಸಿರವಾರ: ತಾಲೂಕಿನ ಸಮೀಪದ ನವಲಕಲ್ ಗ್ರಾಮದ ಎರಡನೇ ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಪುಟಾಣಿ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಸೂಕ್ತ ಕಟ್ಟಡ, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಯಿಲ್ಲದೆ ಮಕ್ಕಳು ಮರದ ನೆರಳಿನಲ್ಲೇ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಂಭೀರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

 

ನವಲಕಲ್ ಗ್ರಾಮದ ಎರಡನೇ ಅಂಗನವಾಡಿ ಕೇಂದ್ರವು ಹಲವು ವರ್ಷಗಳಿಂದ ಸಣ್ಣ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಅವರು ಗ್ರಾಮಸ್ಥರ ಗಮನಕ್ಕೆ ತರದೆ ಕೇಂದ್ರವನ್ನು ಏಕಾಏಕಿ ತೊರೆದು ಬೇರೆ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಸ್ಥಳಾಂತರಗೊಂಡ ಬಳಿಕವೂ ಮಕ್ಕಳಿಗೆ ಪಾಠ ಕಲಿಸಲು ಸೂಕ್ತ ಕಟ್ಟಡದ ವ್ಯವಸ್ಥೆಯಾಗದೆ ಮರದ ನೆರಳಿನಲ್ಲೇ ಅಂಗನವಾಡಿ ನಡೆಸುವ ಪರಿಸ್ಥಿತಿ ಎದುರಾಗಿದೆ.

 

ಈ ಸಮಸ್ಯೆಯನ್ನು ಹಲವು ಬಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಯ್ಯ ಸ್ವಾಮಿ ಅವರ ಗಮನಕ್ಕೆ ಪತ್ರಿಕಾ ಮಾಧ್ಯಮದವರು, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಕಾರ್ಯಾಧ್ಯಕ್ಷರು ಹಾಗೂ ಗ್ರಾಮಸ್ಥರು ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.

 

ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ವಿಚಾರದಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಗ್ರಾಮಕ್ಕೆ ಭೇಟಿ ನೀಡಿ ಹಿರಿಯರೊಂದಿಗೆ ಚರ್ಚಿಸಿ ಸೂಕ್ತ ಕಟ್ಟಡ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕಾಗಿತ್ತು. ಆದರೆ, ಈವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆಯದಿರುವುದು ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಕಾರ್ಯಾಧ್ಯಕ್ಷ ವೆಂಕಟೇಶ್ ಶಂಕ್ರಿ ದೇವತಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಮರದ ನೆರಳಿನಲ್ಲಿ ಮಕ್ಕಳ ಕಲಿಕೆ:

 

ಮಾಧ್ಯಮ ಮಿತ್ರರು ಹಾಗೂ ಸಂಘಟನೆಯ ಮುಖಂಡರು ಅಂಗನವಾಡಿ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳು ಮರದ ನೆರಳಿನಲ್ಲಿ ಕುಳಿತು ಕಲಿಯುತ್ತಿರುವ ದೃಶ್ಯ ಕಂಡುಬಂದಿದೆ. ಪುಟ್ಟ ಮಕ್ಕಳಿಗೆ ಸುರಕ್ಷಿತ ವಾತಾವರಣ, ಕುಡಿಯುವ ನೀರು ಹಾಗೂ ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ಆತಂಕಕಾರಿ ಸಂಗತಿಯಾಗಿದೆ. ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸಬೇಕಾದ ಅಂಗನವಾಡಿ ಕೇಂದ್ರವೇ ಮೂಲಸೌಕರ್ಯಗಳಿಲ್ಲದೆ ನಡೆಯುತ್ತಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡಿಸಿದೆ.

 

ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹ:

 

ಕೂಡಲೇ ಸಂಬಂಧಪಟ್ಟ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಮಕ್ಕಳ ಸುರಕ್ಷತೆ ಹಾಗೂ ಕಲಿಕೆಗೆ ಅಗತ್ಯವಾದ ಕಟ್ಟಡ ಮತ್ತು ಮೂಲಸೌಕರ್ಯಗಳನ್ನು ತಕ್ಷಣ ಒದಗಿಸಬೇಕು. ಈ ಅವ್ಯವಸ್ಥೆಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆ, ಮೇಲ್ವಿಚಾರಕಿ ನೀಲಮ್ಮ ಹಾಗೂ ಸಿರವಾರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಯ್ಯ ಸ್ವಾಮಿ ಅವರ ಕರ್ತವ್ಯ ನಿರ್ವಹಣೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಕರ್ತವ್ಯ ಲೋಪ ಸಾಬೀತಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ವೆಂಕಟೇಶ್ ಶಂಕ್ರಿ ದೇವತಗಲ್ ಆಗ್ರಹಿಸಿದ್ದಾರೆ.

 

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You missed

*ಪೊಲೀಸ್ ಸಮವಸ್ತ್ರಕ್ಕೆ ಸೇವಾ ಹಿರಿತನದ ಬ್ಯಾಡ್ಜ್: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೋಹನ್‌ ಕುಮಾರ್‌ ಪ್ರಸ್ತಾವನೆ* ಕಂಪ್ಲಿ : ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಸೇವಾ ಹಿರಿತನ ಸುಲಭವಾಗಿ ಗುರುತಿಸಲು ಸಮವಸ್ತ್ರದ ಮೇಲೆ ವಿಶೇಷ ಬ್ಯಾಡ್ಜ್ ಅಳವಡಿಸುವಂತೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯ ಮೋಹನ್‌ ಕುಮಾರ್‌ ದಾನಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಪೊಲೀಸ್‌ ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಅಧಿಕಾರಿಗಳ ಅನುಭವ ಮತ್ತು • ಸರ್ಕಾರಕ್ಕೆ ಸೇವಾ ಹಿರಿತನಕ್ಕೆ ಸೂಕ್ತ ಮನ್ನಣೆ ನೀಡುವಂತೆ ಪ್ರಸ್ತಾಪಿಸಿದ್ದಾರೆ. ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಸೇವಾ ಅನುಭವ, ಜವಾಬ್ದಾರಿ ಹಾಗೂ ಹಿರಿತನವನ್ನು ಸಾರ್ವಜನಿಕರು ಮತ್ತು ಇಲಾಖೆಯ ಇತರ ಸಿಬ್ಬಂದಿ ಸುಲಭವಾಗಿ ಗುರುತಿಸುವಂತಾಗಬೇಕು. ಇದರಿಂದ ಪೊಲೀಸ್‌ ಇಲಾಖೆಯಲ್ಲಿ ಶಿಸ್ತು, ಗೌರವ ಹಾಗೂ ಆಡಳಿತಾತ್ಮಕ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವಿಶೇಷವಾಗಿ ಐಪಿಎಸ್ ಅಧಿಕಾರಿಗಳಲ್ಲದ ಪೊಲೀಸ್ ಅಧಿಕಾರಿಗಳ ಸೇವಾ ಅವಧಿಯನ್ನು ಆಧರಿಸಿ ಅವರಿಗೆ ಪ್ರತ್ಯೇಕ ಗುರುತಿನ ಬ್ಯಾಡ್ಜ್‌ಗಳನ್ನು ನೀಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಅದರಂತೆ, 5 ವರ್ಷ ಸೇವೆ ಸಲ್ಲಿಸಿದವರಿಗೆ ‘ಸೀನಿಯರ್’, 10 ವರ್ಷ ಸೇವೆ ಸಲ್ಲಿಸಿದವರಿಗೆ ‘ಸೂಪ‌ರ್ ಸೀನಿಯರ್’ ಹಾಗೂ 15 ವರ್ಷ ಸೇವೆ ಸಲ್ಲಿಸಿದವರಿಗೆ ‘ಮೋಸ್ಟ್ ಸೀನಿಯರ್’ ಎಂಬ ಗುರುತಿನ ಬ್ಯಾಡ್ಜ್‌ಗಳನ್ನು ಸಮವಸ್ತ್ರದ ಮೇಲೆ ಅಳವಡಿಸುವಂತೆ ಸಲಹೆ ನೀಡಿದ್ದಾರೆ. ವರದಿ : ಜಿಲಾನಸಾಬ್ ಬಡಿಗೇರ್