ರಾಯಚೂರು, ನ. 8:** ಎಐಎಂಐಎಂ ಪಕ್ಷದ ರಾಯಚೂರು ಘಟಕವು 19-08-2026ರಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವ ಅಧಿಕಾರಿಗಳು ಸಂಕೇಶ್ವರಾಳ ಬಸ್ ನಿಲ್ದಾಣವನ್ನು ಭೌತಿಕವಾಗಿ ಪರಿಶೀಲಿಸಿದ್ದಾರೆ.
ಪರಿಶೀಲನೆಯ ಸಂದರ್ಭದಲ್ಲಿ ಸದರಿ ಬಸ್ ನಿಲ್ದಾಣವು ಶಿಥಿಲಾವಸ್ಥೆಯಲ್ಲಿದ್ದು, ಸಾರ್ವಜನಿಕರು ಬಳಸಲು ಯೋಗ್ಯವಾಗಿಲ್ಲ ಎಂಬುದು ಕಂಡುಬಂದಿದೆ. ಸಾರ್ವಜನಿಕರ ಸಂಚಾರ ಮತ್ತು ಹಿತದೃಷ್ಟಿಯಿಂದ ಹಳೆಯ ಬಸ್ ನಿಲ್ದಾಣವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ದೇವದುರ್ಗ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು 24-09-2026ರಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಆದರೆ, ವರದಿ ಸಲ್ಲಿಕೆಯಾಗಿ ಹಲವು ದಿನಗಳು ಕಳೆದರೂ ತೆರವು ಕಾರ್ಯ ಕೈಗೊಳ್ಳದ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಮುಖಂಡರು ಜಿಲ್ಲಾ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಮೌಖಿಕವಾಗಿ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಸಂಕೇಶ್ವರಾಳ ಬಸ್ ತಂಗುದಾಣವನ್ನು 2026-27ನೇ ಸಾಲಿನ ತಾಲೂಕು ಪಂಚಾಯಿತಿ ಅನಿರ್ಬಂಧಿತ ಅನುದಾನದ ಕ್ರಿಯಾಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಹಳೆಯ ತಂಗುದಾಣವನ್ನು ತೆರವುಗೊಳಿಸಿ ಹೊಸ ಬಸ್ ತಂಗುದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಅಕ್ಟೋಬರ್ 10ರಂದು ‘ನೈಜ ದೆಸೆ ಕನ್ನಡ ದಿನಪತ್ರಿಕೆ’ಯಲ್ಲಿ ಸಂಕೇಶ್ವರಾಳ ಬಸ್ ನಿಲ್ದಾಣದ ಸಮಸ್ಯೆ ಕುರಿತು ವರದಿ ಪ್ರಕಟಿಸಲಾಗಿತ್ತು. ಇದೀಗ ಪತ್ರಿಕಾ ವರದಿ ಹಾಗೂ ಎಐಎಂಐಎಂ ಪಕ್ಷದ ಮನವಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಂದಿನ ಕ್ರಮಕ್ಕೆ ಮುಂದಾಗಿರುವುದು ಸಾರ್ವಜನಿಕರ ಗಮನ ಸೆಳೆದಿದೆ.
ಈ ಸಂದರ್ಭದಲ್ಲಿ ಎಐಎಂಐಎಂ ರಾಯಚೂರು ನಗರ ಅಧ್ಯಕ್ಷ ಶಬ್ಬೀರ್ ಅಹ್ಮದ್ ಹೌದಡಿ, ನಗರ ಜಂಟಿ ಕಾರ್ಯದರ್ಶಿ ತನ್ವೀರ್ ಅಹ್ಮದ್ ಖಾನ್, ವಾರ್ಡ್ ನಂ. 29ರ ಅಧ್ಯಕ್ಷ ಮೊಹಮ್ಮದ್ ಅಲಿಮ್ ಹಾಗೂ ವಾರ್ಡ್ ನಂ. 14ರ ಅಧ್ಯಕ್ಷ ಸೊಹೈಲ್ ಖುರೇಷಿ ಉಪಸ್ಥಿತರಿದ್ದರು.
**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ

