ರಾಯಚೂರು ನವೆಂಬರ್ 16 (ಕರ್ನಾಟಕ ವಾರ್ತೆ): ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‌ನಲ್ಲಿ ನವೆಂಬರ್ 15ರಂದು ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ಮಾತನಾಡಿ, ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕನವರು ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು. ಗಿಡ-ಮರಗಳನ್ನು ಬೆಳೆಸುವುದರೊಂದಿಗೆ ಪರಿಸರ ಸಂರಕ್ಷಣೆಗೆ ವಿಶೇಷ ಕಾಳಜಿವಹಿಸಿ ಜೀವಿಸಿದ ಅವರ ಶೈಲಿಯೇ ಎಲ್ಲರಿಗೂ ಪ್ರೇರಣೆಯಾಗಬೇಕು. ಅವರು ಪರಿಸರ ಸಂರಕ್ಷಣೆ ಕುರಿತು ಅರಿವು, ಜಾಗೃತಿ ಮೂಡಿಸುತ್ತಿದ್ದರು. ನಮ್ಮ ನೆಲ ಜಲ ಪರಿಸರ ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಾಮಾನ್ಯ ಪರಿಸರ ಪ್ರಜ್ಞೆಯ ಅರಿವಾದರೆ ತಿಮ್ಮಕ್ಕನಂತವರನ್ನು ಸ್ಫೂರ್ತಿಯಾಗಿ ಪಡೆದುಕೊಂಡು ನಮ್ಮ ನಾಡ ಭೂಮಿಯನ್ನು ಸದಾ ಹಸಿರಾಗಿಡಬಹುದು. ತಮ್ಮ ಬಹುಪಾಲು ಜೀವಿತ ಕಾಲವನ್ನು ಹಸಿರೇ ಉಸಿರೆಂದು ಭಾವಿಸಿ ಪರಿಸರ ಸೇವೆ ಮತ್ತು ಸಂರಕ್ಷಣೆಗಾಗಿ ಮುಡಿಪಾಗಿಟ್ಟು, ಅಗಲಿದ ಈ ಮಹಾ ಚೇತನಕ್ಕೆ ನಮನಗಳೊಂದಿಗೆ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಎಂದು ತಿಳಿಸಿದರು.
ಕುಲಸಚಿವರಾದ ಡಾ.ಎ.ಚನ್ನಪ್ಪ ಅವರು ಮಾತನಾಡಿ, ಸಾಲುಮರದ ತಿಮ್ಮಕ್ಕನವರ ಜೀವನ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ. ಅನಕ್ಷರಸ್ಥೆಯಾಗಿದ್ದರೂ ನಿಸರ್ಗದ ಜ್ಞಾನದೊಂದಿಗೆ ಮರಗಳನ್ನೆ ಮಕ್ಕಳೆಂದು ಭಾವಿಸಿ ವೃಕ್ಷವನವನ್ನು ನಿರ್ಮಿಸಿದ್ದಾರೆ. ಅವರು ನಮ್ಮನ್ನಗಲಿದರೂ ನಮ್ಮ ಮನದಾಳದಲ್ಲಿ ಅವರು ಎಂದಿಗೂ ಜೀವಂತವಾಗಿದ್ದಾರೆ. ಅವರ ತ್ಯಾಗಮಯ ಜೀವನ ಮರೆಯಲಾರದ್ದು ಎಂದು ಹೇಳಿದರು.
ಉಪಕುಲಸಚಿವರಾದ ಡಾ.ಕೆ.ವೆಂಕಟೇಶ ಅವರು ಮಾತನಾಡಿ, ಮಾಗಡಿ ತಾಲ್ಲೂಕಿನಲ್ಲಿ ರಸ್ತೆ ಬದಿ ಆಲದ ಮರಗಳನ್ನು ನೆಟ್ಟು ಬೆಳೆಸಿದ ಅವರು ಸಾಲುಮರದ ತಿಮ್ಮಕ್ಕ ಎಂದೇ ಚಿರಪರಿಚಿತರಾದರು. ಸಸಿಗಳನ್ನು ಮಕ್ಕಳಂತೆ ಪ್ರೀತಿಯಿಂದ ಸಾಕಿ ಸಲಹಿದ್ದಾರೆ. ಅವರು ಬದುಕಿದ ದಾರಿ ಎಲ್ಲರಿಗೂ ಮಾದರಿಯಾಗಬೇಕು, ತಾವು ನೆಟ್ಟ ಸಸಿಗಳನ್ನು ತಮ್ಮ ಮಕ್ಕಳೆಂದು ತಿಳಿದು ಅವರು ಜೀವನದ ಸಾರ್ಥಕತೆಯನ್ನು ಕಂಡುಕೊAಡರು. ಅವರ ಅಗಲಿಕೆ ನಮ್ಮೆಲ್ಲರಿಗೂ ದುಖಃವನ್ನುಂಟು ಮಾಡಿದೆ. ಅವರನ್ನು ಮಾದರಿಯಾಗಿಟ್ಟುಕೊಂಡು ಭವಿಷ್ಯದ ದೃಷ್ಟಿಯಿಂದ ಬರುವ ಪೀಳಿಗೆಗೆ ಅವರ ಪರಿಸರ ಪ್ರೇಮ ಮತ್ತು ಬದುಕಿದ ರೀತಿಯನ್ನು ತೋರಿಸಿಕೊಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಡಾ.ಸುಯಮೀಂದ್ರ ಕುಲಕರ್ಣಿ, ಡೀನರಾದ ಪ್ರೊ.ಪಾರ್ವತಿ ಸಿ.ಎಸ್., ಡಾ.ಲತಾ ಎಂ.ಎಸ್., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ತಿಮ್ಮಕ್ಕನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

Leave a Reply

Your email address will not be published. Required fields are marked *