ಲಿಂಗಸಗೂರು : ನ 05 –
ಅಂಗನವಾಡಿ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ನವೆಂಬರ್ 29ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಿಂದ 25ರಿಂದ 30 ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ತಾಲೂಕು ಸಮಿತಿ ತಿಳಿಸಿದೆ.
ಪಟ್ಟಣದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ (ಸಿಡಿಪಿಒ) ಮನವಿ ಪತ್ರ ಸಲ್ಲಿಸಿ ಮಾತನಾಡಿದ ಮುಖಂಡರು, ನೌಕರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಗಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯ ನೌಕರರು ದೆಹಲಿಗೆ ತೆರಳಲಿದ್ದಾರೆ ಎಂದರು. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದರೂ ಅಂಗನವಾಡಿ ನೌಕರರಿಗೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೌರವಧನ ಇನ್ನು ತಲುಪಿಲ್ಲ. ಹಬ್ಬದ ಸಂದರ್ಭದಲ್ಲೇ ಗೌರವಧನ ವಿಳಂಬ ವಾಗುತ್ತಿರುವುದರಿಂದ ನೌಕರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಬಾಕಿ ಇರುವ ಗೌರವಧನವನ್ನು ಬಿಡುಗಡೆ ಮಾಡಿ ನೌಕರರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಜಂಟಿ ಕಾರ್ಯದರ್ಶಿ ರಮೇಶ್ ವೀರಾಪೂರು, ತಾಲೂಕು ಅಧ್ಯಕ್ಷೆ ಬಸಮ್ಮ ಮುದಗಲ್, ಉಪಾಧ್ಯಕ್ಷೆ ಲಕ್ಷ್ಮೀ ಎಸ್. ನಗನೂರು, ಪ್ರಧಾನ ಕಾರ್ಯದರ್ಶಿ ಸರಸ್ವತಿ ಬಿ. ಈಚನಾಳ, ಖಜಾಂಚಿ ಸುಜಾತ ಲಿಂಗಸುಗೂರು ಹಾಗೂ ಮಲ್ಲನಗೌಡ ಮುದಗಲ್ ಸೇರಿದಂತೆ ವಿವಿಧ ಕೇಂದ್ರಗಳ ನೌಕರರು ಹಾಜರಿದ್ದರು.
