ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿ ಆಂಧ್ರಪ್ರದೇಶದ ಪಾಲಿಗೆ ನಿಗದಿಯಾಗಿರುವ 3 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ಹರಿಸುವ ಮೂಲಕ ರಾಯಚೂರು ಹಾಗೂ ಕೊಪ್ಪಳ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಮಾನ್ಯ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ರಾಜ್ಯದ ರೈತರ ಹಿತಾಸಕ್ತಿ ಹಾಗೂ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಸಚಿವರಾದ ಶ್ರೀ ಶಿವರಾಜ್ ತಂಗಡಗಿ ಅವರ ಸಹಕಾರದೊಂದಿಗೆ ಶಾಸಕರಾದ ಹಂಪನಗೌಡ ಬಾದರ್ಲಿ, ಬಿ. ನಾಗೇಂದ್ರ, ಆರ್. ಬಸನಗೌಡ ತುರ್ವಿಹಾಳ, ಬಸನಗೌಡ ಬಾದರ್ಲಿ, ಬಿ.ಎಂ. ನಾಗರಾಜ್, ಗವಿಯಪ್ಪ, ಮುಖಂಡರಾದ ರವಿ ಬೋಸರಾಜು ಸೇರಿದಂತೆ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಸ್ತೃತವಾಗಿ ಚರ್ಚಿಸಿತು. ತುಂಗಭದ್ರಾ ಎಡದಂಡೆ ಕಾಲುವೆಯ ನೀರನ್ನು ಅವಲಂಬಿಸಿ ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ಹಲವು ಭಾಗಗಳ ಸಾವಿರಾರು ರೈತ ಕುಟುಂಬಗಳು ಕೃಷಿ ಚಟುವಟಿಕೆ ನಡೆಸುತ್ತಿವೆ. ಈ ಭಾಗದ ರೈತರ ಬದುಕು ಸಂಪೂರ್ಣವಾಗಿ ನೀರಾವರಿ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದೆ. ಸಮಯಕ್ಕೆ ಸರಿಯಾಗಿ ಸಮರ್ಪಕ ಪ್ರಮಾಣದ ನೀರು ದೊರೆಯದಿದ್ದರೆ ಬೆಳೆಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿನ ಆಂಧ್ರಪ್ರದೇಶದ ಪಾಲಿನ 3 ಟಿಎಂಸಿ ನೀರನ್ನು ರೈತರ ಕೃಷಿ ಅಗತ್ಯತೆಗಳಿಗೆ ಅನುಗುಣವಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ಹರಿಸುವ ಕುರಿತು ಸರ್ಕಾರ ವಿಶೇಷ ಗಮನಹರಿಸಬೇಕು ಎಂದು ನಿಯೋಗ ಒತ್ತಾಯಿಸಿತು. ನಿಯೋಗದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರೈತರ ನೀರಿನ ಅಗತ್ಯತೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ರೈತರ ಬದುಕು, ಕೃಷಿ ಹಾಗೂ ನೀರಾವರಿ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ರೈತರೊಂದಿಗೆ ನಾವಿದ್ದೇವೆ. ಯಾವುದೇ ಸಂದರ್ಭದಲ್ಲೂ ರೈತರನ್ನು ಸಂಕಷ್ಟದಲ್ಲಿ ಕೈಬಿಡುವುದಿಲ್ಲ. ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ತುಂಗಭದ್ರಾ ಎಡದಂಡೆ ಕಾಲುವೆಯ ನೀರಿನ ವಿಚಾರದಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡರೆ ಸಾವಿರಾರು ರೈತ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಈ ಭಾಗದ ಕೃಷಿ ಚಟುವಟಿಕೆಗಳಿಗೆ ಹೊಸ ಆಶಾಭಾವನೆ ಮೂಡಲಿದೆ ಎಂಬ ನಿರೀಕ್ಷೆ ರೈತರಲ್ಲಿ ವ್ಯಕ್ತವಾಗಿದೆ

Leave a Reply

Your email address will not be published. Required fields are marked *