ತಾಳಿಕೋಟಿ: ವಿಜಯಪುರ ಜಿಲ್ಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ತನ್ನದೇ ಆದ ಮಹತ್ವದ ಛಾಪು ಮೂಡಿಸಿದೆ. ಆದರೆ, ಇತ್ತೀಚೆಗೆ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಹಿತಿಗಳ ಹೆಸರುಗಳನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಮಹಿಳಾ ಸಾಹಿತಿಗಳನ್ನು ಕಡೆಗಣಿಸಿರುವುದು ಜಿಲ್ಲಾಡಳಿತದ ದೊಡ್ಡ ಪ್ರಮಾದವಾಗಿದೆ ಎಂದು ಉಪನ್ಯಾಸಕಿ ಹಾಗೂ ಸಾಹಿತಿ ಡಾ. ಸುಜಾತಾ ಚಲವಾದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಹಿಳಾ ಸಾಹಿತಿಗಳನ್ನು ನಿರ್ಲಕ್ಷಿಸಿರುವುದು ಪುರುಷ ಪ್ರಧಾನ ಮನೋಭಾವನೆಯನ್ನು ಪ್ರತಿಬಿಂಬಿಸುತ್ತದೆ. ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಸಾಹಿತಿಗಳ ಕೊಡುಗೆಯೂ ಅಪಾರವಾಗಿದೆ. ಜಯಶ್ರೀ ಯರನಾಳ, ಸರಸ್ವತಿ ಚಿಮ್ಮಲಗಿ, ಶಾಂತಾ ಇಮ್ರಾಪೂರ, ಇಂದುಮತಿ ಲಮಾಣಿ, ಸುಶೀಲಾ ಕಮತಗಿ, ಭಾರತಿ ಪಾಟೀಲ, ಡಾ. ಸುಜಾತಾ ಚಲವಾದಿ, ಪ್ರಭಾವತಿ ದೇಸಾಯಿ, ದಾಕ್ಷಾಯಣಿ ಹುಡೇದ, ದಾಕ್ಷಾಯಣಿ ಬಿರಾದಾರ, ಹೇಮಲತಾ ವಸ್ತ್ರದ ಹಾಗೂ ವಿದ್ಯಾವತಿ ಅಂಕಲಗಿ ಸೇರಿದಂತೆ ಅನೇಕರು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ಇಷ್ಟೊಂದು ಪ್ರತಿಭಾವಂತ ಮಹಿಳಾ ಸಾಹಿತಿಗಳಿದ್ದರೂ, ಜಿಲ್ಲಾಡಳಿತದ ಅಧಿಕೃತ ಕಾರ್ಯಕ್ರಮದಲ್ಲಿ ಅವರಲ್ಲಿ ಒಬ್ಬರ ಹೆಸರನ್ನೂ ಸ್ಮರಿಸದಿರುವುದು ವಿಷಾದನೀಯ. ಇದು ಮಹಿಳಾ ಸಾಹಿತಿಗಳ ಸಾಹಿತ್ಯಿಕ ಸಾಧನೆಗೆ ಮಾಡಿದ ಅವಮಾನವಾಗಿದೆ. ಮಹಿಳಾ ಲೇಖಕಿಯಾಗಿ ಇಂತಹ ತಾರತಮ್ಯದ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

