ಸಿಂಧನೂರು: ಸಿಂಧನೂರು ನಗರಸಭೆ ಆಶ್ರಯ ಸಮಿತಿ ವ್ಯಾಪ್ತಿಯ ವಾರ್ಡ್ ಸಂಖ್ಯೆ–31ರ (ಸರ್ವೆ ನಂ.17) ಏಳುರಾಗಿ ಕ್ಯಾಂಪ್‌ನಲ್ಲಿ ಸರ್ಕಾರಿ ಉಚಿತ ಆಶ್ರಯ ವಸತಿ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಕಳೆದ ಸುಮಾರು 16 ವರ್ಷಗಳಿಂದಲೂ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡದೆ ವಿಳಂಬ ಮಾಡುತ್ತಿರುವುದಾಗಿ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಲಾನುಭವಿಗಳ ಹೇಳಿಕೆಯಂತೆ, ಬಡ ಹಾಗೂ ನಿರಾಶ್ರಿತ ಕುಟುಂಬಗಳಿಗಾಗಿ ನಿರ್ಮಿಸಲಾಗಿದ್ದ ಆಶ್ರಯ ಮನೆಗಳ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಇಂದಿಗೂ ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗಿಲ್ಲ. ಇದರಿಂದ ನೂರಾರು ಬಡ ಕುಟುಂಬಗಳು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ.
ಇದೇ ವೇಳೆ ಆಶ್ರಯ ಯೋಜನೆಯ ಫಲಾನುಭವಿಗಳಿಂದ ತಲಾ ₹30,000 ವಂತಿಗೆ ಹಣವನ್ನು ನಗರಸಭೆ ಹಾಗೂ ಆಶ್ರಯ ಸಮಿತಿಯ ಅಧಿಕಾರಿಗಳು ಸಂಗ್ರಹಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹಣ ಪಾವತಿಸಿ ಹಲವು ವರ್ಷಗಳು ಕಳೆದಿದ್ದರೂ ಮನೆಗಳನ್ನು ಹಂಚಿಕೆ ಮಾಡದೇ ಫಲಾನುಭವಿಗಳನ್ನು ಅಲೆದಾಡಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ನಿವಾಸಿಗಳು ತಿಳಿಸಿದ್ದಾರೆ.
ಈ ಕುರಿತು ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರು, ನಗರಸಭೆ ಅಧಿಕಾರಿಗಳು ಹಾಗೂ ಆಶ್ರಯ ಸಮಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಡ ಕುಟುಂಬಗಳು ತಮ್ಮ ಹಕ್ಕಿನ ವಸತಿಯಿಂದ ವಂಚಿತರಾಗಿವೆ ಎಂದು ದೂರಿದ್ದಾರೆ.
ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಫಲಾನುಭವಿಗಳಿಂದ ಸಂಗ್ರಹಿಸಿರುವ ಹಣದ ಲೆಕ್ಕಪತ್ರವನ್ನು ಸಾರ್ವಜನಿಕರಿಗೆ ತಿಳಿಸಬೇಕು. ಜೊತೆಗೆ ವಾರ್ಡ್ ಸಂಖ್ಯೆ–31ರ ಸರ್ವೆ ನಂ.17ರ ಏಳುರಾಗಿ ಕ್ಯಾಂಪ್‌ನ ಆಶ್ರಯ ಮನೆಗಳನ್ನು ತಕ್ಷಣ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಮೂಲಕ ಬಡವರಿಗೆ ನ್ಯಾಯ ಒದಗಿಸಬೇಕು ಎಂದು ವಾರ್ಡ್‌ನ ಗರಿಷ್ಠ ಸಂಖ್ಯೆಯ ಫಲಾನುಭವಿಗಳು ಹಾಗೂ ನಿವಾಸಿಗಳು ಒತ್ತಾಯಿಸಿದ್ದಾರೆ.


